
ನವದೆಹಲಿ: ಮಹಿಳಾ ಕುಸ್ತಿಪಟುಗಳು, ಶನಿವಾರ ಇಲ್ಲಿ ನಡೆದ ಪ್ರೊ ಕುಸ್ತಿ ಲೀಗ್ (ಪಿಡಬ್ಲ್ಯೂಎಲ್) ಬಿಡ್‌ನಲ್ಲಿ ಹೆಚ್ಚಿನ ಮೌಲ್ಯ ಪಡೆದರು. ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ವಿಜೇತೆ ಜಪಾನ್‌ನ ಯುಯಿ ಸುಸಾಕಿ ಅವರು ₹60 ಲಕ್ಷ ದಾಖಲೆ ಮೊತ್ತಕ್ಕೆ ಹರಿಯಾಣ ಥಂಡರ್ಸ್ ಪಾಲಾದರು.
ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ, ಭಾರತದ ಅಂತಿಮ್ ಪಂಘಲ್ ಅವರು 53 ಕೆ.ಜಿ. ವಿಭಾಗದಲ್ಲಿ ₹52 ಲಕ್ಷ ಮೊತ್ತಕ್ಕೆ ಯುಪಿ ಡಾಮಿನೇಟರ್ಸ್‌ಗೆ ಸೇರ್ಪಡೆಯಾದರು.
ಪೋರ್ಟೊರಿಕೊd ಅನಾ ಗೊಡಿನೆಝ್ ಅವರನ್ನು ಪಂಜಾಬ್ ರಾಯಲ್ಸ್ ತಂಡ ₹46 ಲಕ್ಷಕ್ಕೆ ಸೆಳೆದುಕೊಂಡಿತು. 76 ಕೆ.ಜಿ. ವಿಭಾಗದಲ್ಲಿ ಅಜರ್‌ಬೈಜಾನ್‌ನ ಅನಸ್ತೇಸಿಯಾ ಅಲ್ಪಯೆವಾ ಅವರನ್ನು ಡೆಲ್ಲಿ ದಂಗಲ್ ವಾರಿಯರ್ಸ್ ₹27 ಲಕ್ಷಕ್ಕೆ ತನ್ನ ಪಾಲು ಮಾಡಿಕೊಂಡಿತು.
ಎ+ ಕೆಟಗರಿ ಕುಸ್ತಿಪಟುಗಳ ಮೂಲಬೆಲೆ ₹18 ಲಕ್ಷಕ್ಕೆ ನಿಗದಿಯಾಗಿತ್ತು. ಆದರೆ ಹೆಚ್ಚಿನವರು ಇದಕ್ಕಿಂತ ಹೆಚ್ಚಿನ ಮೌಲ್ಯ ಪಡೆದರು.
ಪುರುಷರ ವಿಭಾಗದಲ್ಲಿ ಪೋಲೆಂಡ್‌ನ ರಾಬರ್ಟ್ ಬರಾನ್ ₹55 ಲಕ್ಷಕ್ಕೆ ಮಹಾರಾಷ್ಟ್ರ ಕೇಸರಿ ತಂಡದ ಪಾಲಾದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಮನ್ ಸೆಹ್ರಾವತ್ ಅವರನ್ನು ₹51 ಲಕ್ಷಕ್ಕೆ ಟೈಗರ್ಸ್ ಆಫ್ ಮುಂಬೈ ದಂಗಲ್ಸ್ ತನ್ನ ಪಾಲು ಮಾಡಿಕೊಂಡಿತು.
ಕುಸ್ತಿಪಟುಗಳನ್ನು ನಾಲ್ಕು ವಿಭಾಗಗಳಲ್ಲಿ ಎ+ (ಪ್ರಮುಖ), ಎ, ಬಿ ಮತ್ತು ಸಿ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಈ ವಿಭಾಗದ ಪೈಲ್ವಾನರ ಮೂಲಬೆಲೆಯನ್ನು ಕ್ರಮವಾಗಿ ₹18 ಲಕ್ಷ, ₹12 ಲಕ್ಷ, ₹8 ಲಕ್ಷ ಮತ್ತು ₹3 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಆಟಗಾರರನ್ನು ಪಡೆಯಲು ಫ್ರಾಂಚೈಸಿಗಳಿಗೆ ₹2 ಕೋಟಿ ಥೈಲಿ ಹೊಂದಲು ಅವಕಾಶ ನೀಡಲಾಗಿತ್ತು.
ಆರು ತಂಡಗಳು ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿವೆ. ಪ್ರತಿ ತಂಡ 9 ರಿಂದ 12 ಮಂದಿ ಸ್ಪರ್ಧಿಗಳನ್ನು ಹೊಂದಲು ಅವಕಾಶ ಮಾಡಲಾಗಿದೆ. ಪ್ರತಿಯೊಂದು ತಂಡ ನಾಲ್ಕು ಮಂದಿ ವಿದೇಶಿ ಕುಸ್ತಿಪಟುಗಳನ್ನು (ಇಬ್ಬರು ಪುರುಷರು, ಇಬ್ಬರು ಮಹಿಳೆಯರು) ಹೊಂದಬಹುದಾಗಿದೆ. ಕಡೇಪಕ್ಷ ಸಿ ಕೆಟಗರಿಯ ಒಬ್ಬರಾದರೂ ತಂಡದಲ್ಲಿರುವುದು ಕಡ್ಡಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.