ADVERTISEMENT

ಚೆಸ್ ಟೂರ್ನಿ: ಮುನ್ನಡೆಯಲ್ಲಿ ಚಕ್ರವರ್ತಿ, ರವಿ ಗೋಪಾಲ್

ಪುತ್ತೂರಿನಲ್ಲಿ ಆರಂಭಗೊಂಡ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿ: ರಾಮನಾಥನ್‌ಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 16:10 IST
Last Updated 24 ಜನವರಿ 2026, 16:10 IST
ಚಕ್ರವರ್ತಿ
ಚಕ್ರವರ್ತಿ   

ಪುತ್ತೂರು (ದಕ್ಷಿಣ ಕನ್ನಡ): ಇಂಟರ್‌ನ್ಯಾಷನಲ್ ಮಾಸ್ಟರ್‌, ತೆಲಂಗಾಣದ ಚಕ್ರವರ್ತಿ ಎಂ. ರೆಡ್ಡಿ ಸೇರಿದಂತೆ ಐವರು ಇಲ್ಲಿ ಶನಿವಾರ ಆರಂಭಗೊಂಡ ಪಿಟಿಸಿಎ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯಲ್ಲಿ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. 

ನೆಹರು ನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಟೂರ್ನಿಯ 5 ಸುತ್ತುಗಳ ಮುಕ್ತಾಯಕ್ಕೆ ದಕ್ಷಿಣ ಕನ್ನಡದ ಲಕ್ಷಿತ್ ಸಾಲಿಯಾನ್‌, ರವೀಶ್ ಕೋಟೆ, ಕೊಪ್ಪದ ಲೀಲಾ ಜಯಕೃಷ್ಣ ಮತ್ತು ಇಂಟರ್‌ನ್ಯಾಷನಲ್ ಮಾಸ್ಟರ್ ಬೆಂಗಳೂರಿನ ರವಿ ಗೋಪಾಲ್ ಹೆಗ್ಡೆ ತಲಾ 5 ಪಾಯಿಂಟ್ಸ್ ಗಳಿಸಿದ್ದು ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಚಕ್ರವರ್ತಿ ಮುನ್ನಡೆಯಲ್ಲಿದ್ದಾರೆ.  

ಸ್ಥಳೀಯ ಆಟಗಾರರಾದ ಧನುಷ್ ರಾಮ್, ಪಂಕಜ್ ಭಟ್ ಮತ್ತು ವಿಹಾನ್ ಶೆಟ್ಟಿ ತಲಾ 4.5 ಪಾಯಿಂಟ್ ಗಳಿಸಿದ್ದಾರೆ. ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ರಾಮನಾಥನ್ ಬಾಲಸುಬ್ರಹ್ಮಣ್ಯಂ ಸೇರಿದಂತೆ 30 ಮಂದಿ 4 ಪಾಯಿಂಟ್‌ ಗಳಿಸಿದ್ದಾರೆ. 

ADVERTISEMENT

2123 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಚಕ್ರವರ್ತಿ ಎಲ್ಲ ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದುಕೊಂಡರು. ಆರನೇ ಶ್ರೇಯಾಂಕಿತ, 1910 ರೇಟಿಂಗ್‌ನ ರವಿಗೋಪಾಲ್ ಹೆಗ್ಡೆ ಕೂಡ ಆಧಿಪತ್ಯ ಸ್ಥಾಪಿಸಿದರು. ಆದರೆ ಎರಡನೇ ಶ್ರೇಯಾಂಕಿತ, 1992 ರೇಟಿಂಗ್‌ನ ರಾಮನಾಥನ್ ಮೂರನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ಉಲ್ಲಾಸ್ ಪಿ.ಜೆ (1586) ಮತ್ತು 5ನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ವಿಹಾನ್ ಶೆಟ್ಟಿ (1769) ಜೊತೆ ಡ್ರಾ ಮಾಡಿಕೊಂಡರು. 

ಭಾನುವಾರದ ಮೊದಲ ಸುತ್ತಿನಲ್ಲಿ ರಾಮನಾಥನ್ 4 ಪಾಯಿಂಟ್ಸ್ ಹೊಂದಿರುವ ದಕ್ಷಿಣ ಕನ್ನಡದ ನಿಹಾರಿಕಾ ವಿರುದ್ಧ ಸೆಣಸಲಿದ್ದು ರವಿ ಗೋಪಾಲ್ ಹೆಗ್ಡೆ ಚಕ್ರವರ್ತಿ ವಿರುದ್ಧ ಆಡಲಿದ್ದಾರೆ.  

ರವಿ ಗೋಪಾಲ್ ಹೆಗ್ಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.