ADVERTISEMENT

ಇಂದಿನಿಂದ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌, ವಿನೇಶಾ ಆಕರ್ಷಣೆ

ಪಿಟಿಐ
Published 17 ಫೆಬ್ರುವರಿ 2020, 20:00 IST
Last Updated 17 ಫೆಬ್ರುವರಿ 2020, 20:00 IST
ಬಜರಂಗ್‌ ಪೂನಿಯಾ ಹಾಗೂ ವಿನೇಶಾ ಪೋಗಟ್‌– ಪಿಟಿಐ ಚಿತ್ರಗಳು
ಬಜರಂಗ್‌ ಪೂನಿಯಾ ಹಾಗೂ ವಿನೇಶಾ ಪೋಗಟ್‌– ಪಿಟಿಐ ಚಿತ್ರಗಳು   

ನವದೆಹಲಿ: ಭಾರತದ ಬಜರಂಗ್‌ ಪೂನಿಯಾ ಹಾಗೂ ವಿನೇಶಾ ಪೋಗಟ್‌ ಮಂಗಳವಾರ ಇಲ್ಲಿ ಆರಂಭವಾಗಲಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಹೋದ ಆವೃತ್ತಿಯ 65 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಬಜರಂಗ್‌ ಅದೇ ರೀತಿಯ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ. 53 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದ ವಿನೇಶಾ, ಈ ಬಾರಿ ಸಾಧನೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಕೆ.ಡಿ. ಜಾಧವ್‌ ಕುಸ್ತಿ ಅಂಗಣದಲ್ಲಿ ನಡೆಯುವ ಆರು ದಿನಗಳ ಹಣಾಹಣಿ, ಒಲಿಂಪಿಕ್ಸ್‌ ಪದಕದ ಕನಸು ಹೊತ್ತಿರುವ ಭಾರತದ ಪೈಲ್ವಾನರಿಗೆ ಕೌಶಲ ತೋರಲು ಉತ್ತಮ ವೇದಿಕೆಯಾಗಿದೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ರ‍್ಯಾಂಕಿಂಗ್‌ ಟೂರ್ನಿಯಾಗಿ ಈ ಚಾಂಪಿಯನ್‌ಷಿಪ್‌ ಅನ್ನು ವಿಶ್ವ ಕುಸ್ತಿ ಒಕ್ಕೂಟ (ಯುಡಬ್ಲ್ಯುಡಬ್ಲ್ಯು)ಗುರುತಿಸಿದೆ.

‍ಬಜರಂಗ್‌ ಅಲ್ಲದೆ ದೀಪಕ್‌ ಪೂನಿಯಾ, ರವಿಕುಮಾರ್‌ ದಹಿಯಾ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕೂಡ 30 ಮಂದಿಯ ಭಾರತ ತಂಡದಲ್ಲಿ ಇದ್ದಾರೆ. ಅನ್ಷು ಮಲಿಕ್‌, ಆಶು ಹಾಗೂ ಸೋನಮ್‌ ಮಲಿಕ್‌ ಭಾರತ ಪಡೆಯಲ್ಲಿರುವ ಯುವ ಪಟುಗಳು.

ಎರಡು ವರ್ಷಗಳ ಬಳಿಕ ಏಷ್ಯನ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸಿದೆ. ಕಳೆದ ವರ್ಷ ಚೀನಾದಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪೈಲ್ವಾನರು 16 ಪದಕಗಳನ್ನು ಗಳಿಸಿದ್ದರು. ತಂಡದಲ್ಲಿದ್ದ ಬಜರಂಗ್‌, ಏಕೈಕ ಚಿನ್ನದ ಪದಕ (65 ಕೆಜಿ ವಿಭಾಗ) ಗೆದ್ದಿದ್ದರು.

2019ರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಚಿನ್ನದ ಪದಕ ವಿಜೇತ ಜಪಾನ್‌ ಪಟು ಕೆಂಚಿರೊ ಫುಮಿಟಾ ಹಾಗೂ ಕಜಕಸ್ತಾನದ ಫ್ರೀಸ್ಟೈಲ್‌ ಪರಿಣತ ನೂರ್‌ಇಸ್ಲಾಮ್‌ ಸನಾಯೆವ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯುವ ಪ್ರಮುಖರು.

ಮೂರು ವಿಭಾಗಗಳು: ಚಾಂಪಿಯನ್‌ಷಿಪ್‌ನಲ್ಲಿ ಮೂರು ವಿಭಾಗಗಳಿವೆ. ಪುರುಷರ ಫ್ರೀಸ್ಟೈಲ್‌, ಗ್ರೀಕೊ ರೋಮನ್‌ ಹಾಗೂ ಮಹಿಳಾ ಕುಸ್ತಿ. ಮೊದಲ ಎರಡು ದಿನಗಳು ಗ್ರೀಕೊ ರೋಮನ್‌ ಸ್ಪರ್ಧೆಗಳು ನಡೆಯಲಿದ್ದರೆ, ನಂತರ ಮಹಿಳಾ ಕುಸ್ತಿ (ಎರಡು ದಿನ) ಹಾಗೂ ಪುರುಷರ ಫ್ರೀಸ್ಟೈಲ್‌ ವಿಭಾಗದಲ್ಲಿ ಪೈಲ್ವಾನರು ಅಖಾಡಕ್ಕಿಳಿಯಲಿದ್ದಾರೆ.

ಚೀನಾ ತಂಡಕ್ಕೆ ಅವಕಾಶವಿಲ್ಲ
ಮಾರಣಾಂತಿಕ ಕೋವಿಡ್‌–19 ಸೋಂಕು ಇರುವ ಕಾರಣ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಚೀನಾದ ಪೈಲ್ವಾನರಿಗೆ ಸರ್ಕಾರ ವೀಸಾ ನೀಡಿಲ್ಲ. ರಾಷ್ಟ್ರೀಯ ಕುಸ್ತಿ ಫೆಡರೇಷನ್‌ನ ಉನ್ನತ ಮೂಲಗಳು ಈ ಕುರಿತು ಮಾಹಿತಿ ನೀಡಿವೆ.

‘40 ಮಂದಿಯಿರುವ ಚೀನಾದ ಬಲಿಷ್ಠ ತಂಡಕ್ಕೆ ವೀಸಾ ನೀಡಲು ಸರ್ಕಾರ ನಿರಾಕರಿಸಿದೆ’ ಎಂದು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್‌ ತೋಮರ್‌ ಹೇಳಿದ್ದಾರೆ. ಅಥ್ಲೀಟ್‌ಗಳ ಆರೋಗ್ಯವನ್ನು ಆದ್ಯತೆಯಾಗಿಟ್ಟುಕೊಂಡು ವೀಸಾ ನೀಡಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

‘ಯಾವುದೇ ದೇಶದ ನಾಗರಿಕರಿಗೆ ನಾವು ವೀಸಾ ನಿರಾಕರಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಚಾಂಪಿಯನ್‌ಷಿಪ್‌ ಒಲಿಂಪಿಕ್ಸ್ ಒಂದು ಭಾಗ. ಕ್ರೀಡೆಯನ್ನು ರಾಜಕೀಯದಿಂದ ದೂರವಿರಿಸಲು ಪ್ರಯತ್ನಿಸುತ್ತೇವೆ. ಆದರೆ ಆರೋಗ್ಯದ ಕಾಳಜಿ ಅಥವಾ ಯಾವುದೇ ತಾಂತ್ರಿಕ ಸಮಸ್ಯೆಗಳಿಗೆ ತನ್ನದೇ ಆದ ನಿಬಂಧನೆಗಳಿವೆ’ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.