ADVERTISEMENT

ಮಲೇಷ್ಯಾ ಓ‍ಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಸೆಮೀಸ್‌ನಲ್ಲಿ ಸಿಂಧುಗೆ ಸೋಲು

ಪಿಟಿಐ
Published 10 ಜನವರಿ 2026, 16:35 IST
Last Updated 10 ಜನವರಿ 2026, 16:35 IST
ಭಾರತದ ಪಿ.ವಿ.ಸಿಂಧು
ಭಾರತದ ಪಿ.ವಿ.ಸಿಂಧು   

ಕ್ವಾಲಾಲಂಪುರ: ಅನುಭವಿ ಆಟಗಾರ್ತಿ ಪಿ.ವಿ.ಸಿಂಧು ಅವರು ಮಲೇಷ್ಯಾ ಓ‍ಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಶನಿವಾರ ಚೀನಾದ ವಾಂಗ್‌ ಝಿಹಿ ವಿರುದ್ಧ ಸೋತರು. ಅದರೊಂದಿಗೆ, ಟೂರ್ನಿಯಲ್ಲಿ ಭಾರತದ ಆಟಗಾರ್ತಿಯ ಯಶಸ್ಸಿನ ಹೋರಾಟ ಅಂತ್ಯಗೊಂಡಿತು.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಸಿಂಧು ಅವರು ಆರಂಭದಿಂದಲೂ ಒತ್ತಡಕ್ಕೆ ಸಿಲುಕಿದಂತೆ ಕಂಡರು. ಹಲವು ಬಾರಿ ಸ್ವಯಂ ಪ್ರಮಾದಗಳನ್ನು ಎಸಗಿದರು. ಹೀಗಾಗಿ, ವಿಶ್ವಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ವಾಂಗ್‌ 21–16, 21–15ರಿಂದ ನೇರ ಗೇಮ್‌ಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು. 

ಕ್ರಾಸ್‌ಕೋರ್ಟ್‌ ಹೊಡೆತಗಳಿಗೆ ಹೆಸರಾದ ಸಿಂಧು ಮೊದಲ ಗೇಮ್‌ನ ಆರಂಭದಲ್ಲಿ 5–2ರಿಂದ ಮುಂದಿದ್ದರು. ಬಳಿಕ, ಪುಟಿದೆದ್ದ 25 ವರ್ಷ ವಯಸ್ಸಿನ ವಾಂಗ್‌ ಅವರು ಬಲವಾದ ಮತ್ತು ಆಕ್ರಮಣಕಾರಿ ಹೊಡೆತಗಳ ಮೂಲಕ ಎದುರಾಳಿಯ ಮೇಲೆ ಒತ್ತಡ ಹೆಚ್ಚಿಸಿದರು. ಮೊದಲ ಗೇಮ್‌ ಗೆದ್ದರು.

ADVERTISEMENT

ಎರಡನೇ ಗೇಮ್‌ನಲ್ಲಿಯೂ ಸಿಂಧು 11–6ರ ಮುನ್ನಡೆ ಪಡೆದಿದ್ದರು. ಈ ವೇಳೆ ವಿರಾಮ ತೆಗೆದುಕೊಂಡರು. ಆದರೆ, ವಿರಾಮದ ಬಳಿಕ ನಿಯಂತ್ರಣ ಕಂಡುಕೊಳ್ಳುವಲ್ಲಿ ಎಡವಿದರು. ಅನಗತ್ಯ ಹೊಡೆತಗಳಿಂದಾಗಿ ಎದುರಾಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟರು. ವಿರಾಮ ತೆಗೆದುಕೊಂಡಿದ್ದರ ಬಗ್ಗೆ ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದರು.

2025ರ ಅಕ್ಟೋಬರ್‌ನಲ್ಲಿ ಗಾಯಗೊಂಡ ನಂತರ ಸಿಂಧು ಅವರು ಮೊದಲ ಬಾರಿಗೆ ಸ್ಪರ್ಧಾ ಕಣಕ್ಕೆ ಮರಳಿದ್ದರು. 30 ವರ್ಷ ವಯಸ್ಸಿನ ಆಟಗಾರ್ತಿ ದೆಹಲಿಯಲ್ಲಿ ಮುಂದಿನ ವಾರ ನಡೆಯಲಿರುವ ಇಂಡಿಯಾ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.