ADVERTISEMENT

ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು ಮುಡಿಗೆ ಚಾಂಪಿಯನ್ ಪಟ್ಟ

ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ: ಇಶಾನ್‌, ತನಿಶಾ ಜೋಡಿಗೆ ಮಿಶ್ರ ಡಬಲ್ಸ್ ಪ್ರಶಸ್ತಿ

ಪಿಟಿಐ
Published 23 ಜನವರಿ 2022, 12:38 IST
Last Updated 23 ಜನವರಿ 2022, 12:38 IST
ಪಿ.ವಿ.ಸಿಂಧು –ಟ್ವಿಟರ್ ಚಿತ್ರ
ಪಿ.ವಿ.ಸಿಂಧು –ಟ್ವಿಟರ್ ಚಿತ್ರ   

ಲಖನೌ: ಯುವ ತಾರೆ ಮಾಳವಿಕಾ ಬಾನ್ಸೋದ್ ಅವರ ಸವಾಲನ್ನು ಸುಲಭವಾಗಿ ಮೀರಿದ ಪಿ.ವಿ.ಸಿಂಧು ಅವರು ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಸಿಂಧು ತಮ್ಮದೇ ದೇಶದ ಎದುರಾಳಿಯನ್ನು 21-13, 21-16ರಲ್ಲಿ ಮಣಿಸಿದರು. ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿರುವ ಹಾಗೂ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಕೇವಲ 35 ನಿಮಿಷಗಳಲ್ಲಿ ಜಯ ಸಾಧಿಸಿದರು. ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನ ಸೂಪರ್ 300 ಟೂರ್ನಿ ಇದಾಗಿದ್ದು 2017ರಲ್ಲೂ ಸಿಂಧು ಚಾಂಪಿಯನ್ ಆಗಿದ್ದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ21-16, 21-12ರಲ್ಲಿ ಟಿ.ಹೇಮಾ ನಾಗೇಂದ್ರ ಬಾಬು ಮತ್ತು ಶ್ರೀವೇದ್ಯ ಗುರಜಡಾ ಎದುರು ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಈ ಪಂದ್ಯ ಕೇವಲ 29 ನಿಮಿಷಗಳಲ್ಲಿ ಮುಕ್ತಾಯ ಕಂಡಿತ್ತು.

ADVERTISEMENT

ಮಹಿಳೆಯರ ಡಬಲ್ಸ್ ಪ್ರಶಸ್ತಿ ಮಲೇಷ್ಯಾದ ಅನಾ ಚಿಂಗ್ ಯಿಕ್ ಚಿಯಾಂಗ್ ಮತ್ತು ಟಿಯೊ ಮೀ ಕ್ಸಿಂಗ್‌ ಅವರ ಪಾಲಾಯಿತು. ಭಾರತದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಅವರನ್ನು ಮಲೇಷ್ಯಾ ಆಟಗಾರ್ತಿಯರು 21-12, 21-13ರಲ್ಲಿ ಮಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಕೃಷ್ಣ ಪ್ರಸಾದ್ ಗರಗ ಮತ್ತು ಪಾಂಜಲ ವಿಷ್ಣುವರ್ಧನ್ ಅವರನ್ನು 21-18, 21-15ರಲ್ಲಿ ಮಣಿಸಿ ಮಲೇಷ್ಯಾದ ಮ್ಯಾನ್ ವೀ ಚಾಂಗ್ ಮತ್ತು ಕಾಯ್‌ ವುನ್ ಟೀ ಪ್ರಶಸ್ತಿ ಗೆದ್ದುಕೊಂಡರು.

ಪುರುಷರ ಫೈನಲ್ ಪಂದ್ಯ ರದ್ದು

ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯವನ್ನು ಕೋವಿಡ್‌ನಿಂದಾಗಿ ರದ್ದು ಮಾಡಲಾಯಿತು. ಫ್ರಾನ್ಸ್‌ನ ಅರ್ನಾದ್ ಮೆರ್ಕಲ್ ಮತ್ತು ಲೂಕಾಸ್ ಕ್ಲೇರ್‌ಬೌಟ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಬೇಕಾಗಿತ್ತು. ಆದರೆ ಇವರ ಪೈಕಿ ಒಬ್ಬರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟ ಕಾರಣ ಪಂದ್ಯವನ್ನು ನಡೆಸದೇ ಇರಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.