ADVERTISEMENT

ಚೀನಾದ ಹೈಯಾಂಗ್‌ಗೆ ಎರಡನೇ ಚಿನ್ನ

ವಿಶ್ವ ಈಜು ಚಾಂಪಿಯನ್‌ಷಿಪ್‌: ಪ್ರಶಸ್ತಿ ಉಳಿಸಿಕೊಂಡ ಸ್ಟೀನ್‌ಬರ್ಗೆನ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 16:12 IST
Last Updated 1 ಆಗಸ್ಟ್ 2025, 16:12 IST
ಚಿನ್ನ ಗೆದ್ದ  ಚೀನಾದ ಈಜುಪಟು ಕಿನ್ ಹೈಯಾಂಗ್ –ಎಎಫ್‌ಪಿ ಚಿತ್ರ
ಚಿನ್ನ ಗೆದ್ದ  ಚೀನಾದ ಈಜುಪಟು ಕಿನ್ ಹೈಯಾಂಗ್ –ಎಎಫ್‌ಪಿ ಚಿತ್ರ   

ಸಿಂಗಪುರ: ಚೀನಾದ ಅನುಭವಿ ಈಜುಪಟು ಕಿನ್ ಹೈಯಾಂಗ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

26 ವರ್ಷದ ಹೈಯಾಂಗ್‌ ಶುಕ್ರವಾರ ಪುರುಷರ 200 ಮೀಟರ್‌ ಬ್ರೆಸ್ಟ್‌ಸ್ಟ್ರೋಕ್‌ ಫೈನಲ್‌ನಲ್ಲಿ 2 ನಿಮಿಷ 07.41 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಸೋಮವಾರ 100 ಮೀಟರ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲೂ ಅವರು ಚಿನ್ನದ ಸಾಧನೆ ಮೆರೆದಿದ್ದರು. 

ಹೈಯಾಂಗ್ ಅವರು 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವದಾಖಲೆಯೊಂದಿಗೆ (2:05.48) ಅವರು ಚಿನ್ನದ ಸಾಧನೆ ಮಾಡಿದ್ದರು. ಈ ಬಾರಿ ಎರಡು ಸೆಕೆಂಡ್ ತಡವಾಗಿ ಗುರಿ ಮುಟ್ಟಿದರು. ಜಪಾನ್‌ನ ಇಪ್ಪೈ ವಟನಾಬೆ (2:07.70) ಬೆಳ್ಳಿ ಮತ್ತು ನೆದರ್ಲೆಂಡ್ಸ್‌ನ ಕ್ಯಾಸ್ಪರ್ ಕಾರ್ಬ್ಯೂ (2:07.73) ಕಂಚಿನ ಪದಕ ಗೆದ್ದರು.

ADVERTISEMENT

ಹಾಲಿ ಚಾಂಪಿಯನ್ ಮ್ಯಾರಿಟ್ ಸ್ಟೀನ್‌ಬರ್ಗೆನ್ ಅವರು ಮಹಿಳೆಯರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಪ್ರಶಸ್ತಿ ಉಳಿಸಿಕೊಂಡರು. ಇಲ್ಲಿ ಎರಡನೇ ಚಿನ್ನದ ಪ್ರಯತ್ನದಲ್ಲಿದ್ದ ಆಸ್ಟ್ರೇಲಿಯಾದ ಮೋಲಿ ಓ'ಕ್ಯಾಲಗನ್ ಅವರ ಸವಾಲನ್ನು ನೆದರ್ಲೆಂಡ್ಸ್‌ನ ಈಜುಪಟು ಮೆಟ್ಟಿನಿಂತರು.

ದೋ‌ಹಾ ಕೂಟದಲ್ಲಿ ಚಿನ್ನ ಗೆದ್ದಿದ್ದ 25 ವರ್ಷದ ಸ್ಟೀನ್‌ಬರ್ಗೆನ್ 52.55 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. 200 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಚಾಂಪಿಯನ್‌ ಆಗಿದ್ದ ಕ್ಯಾಲಗನ್ 52.67 ಸೆಕೆಂಡ್‌ ತೆಗೆದುಕೊಂಡು, ಬೆಳ್ಳಿ ಗೆದ್ದರು. ಅಮೆರಿಕದ ಟೊರಿ ಹಸ್ಕೆ (52.89) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಒಲಿಂಪಿಕ್‌ ಚಾಂಪಿಯನ್‌ ಹ್ಯೂಬರ್ಟ್ ಕೋಸ್ ಪುರುಷರ 200 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಹಂಗೇರಿಯ ಹ್ಯೂಬರ್ಟ್ ಗುರಿ ತಲುಪಲು 1 ನಿಮಿಷ 53.19 ಸೆಕೆಂಡ್‌ ತೆಗೆದುಕೊಂಡರು. 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ ಗೆದ್ದಿದ್ದ ದಕ್ಷಿಣ ಆಫ್ರಿಕಾದ ಪೀಟರ್ ಕೋಟ್ಜೆ ಇಲ್ಲಿ 0.17 ಸೆಕೆಂಡ್‌ಗಳ ಅಂತರದಲ್ಲಿ ಚಿನ್ನ ತಪ್ಪಿಸಿಕೊಂಡರು. ಫ್ರಾನ್ಸ್‌ನ ಯೋಹಾನ್ ನ್ಡೋಯೆ ಬ್ರೌರ್ಡ್ (1:54.62) ಕಂಚು ಗೆದ್ದರು.

ಮಹಿಳೆಯರ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ಅಮೆರಿಕದ ಕೇಟ್ ಡಗ್ಲಾಸ್ ಚಿನ್ನ ಗೆದ್ದರು. 23 ವರ್ಷದ ಡಗ್ಲಾಸ್ ಚಾಂಪಿಯನ್‌ಷಿಪ್‌ ದಾಖಲೆಯೊಂದಿಗೆ (2:18.50) ಗುರಿ ತಲುಪಿದರು. ವಿಶ್ವದಾಖಲೆ ಹೊಂದಿರುವ ರಷ್ಯಾದ ಎವ್ಗೆನಿಯಾ ಚಿಕುನೋವಾ (2:19.96) ಮತ್ತು ದಕ್ಷಿಣ ಆಫ್ರಿಕಾದ ಕೈಲೀನ್ ಕಾರ್ಬೆಟ್ (2:23.52) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಪುರುಷರ 4x200 ಮೀಟರ್ ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಬ್ರಿಟನ್ ಚಿನ್ನ, ಚೀನಾ ಬೆಳ್ಳಿ ಮತ್ತು ಆಸ್ಟ್ರೇಲಿಯಾ ಕಂಚು ಜಯಿಸುವುದರೊಂದಿಗೆ ಆರನೇ ದಿನದ ಸ್ಪರ್ಧೆ ಮುಕ್ತಾಯವಾಯಿತು. 

ಚಿನ್ನ ಗೆದ್ದ  ಚೀನಾದ ಈಜುಪಟು ಕಿನ್ ಹೈಯಾಂಗ್ –ಎಎಫ್‌ಪಿ ಚಿತ್ರ

ಮೆಕಿಂಟೋಷ್‌– ಲೆಡೆಕಿ ಮುಖಾಮುಖಿ ಇಂದು

ಈಜುತಾರೆಯರಾದ ಸಮ್ಮರ್‌ ಮೆಕಿಂಟೋಷ್‌ ಮತ್ತು ಕೇಟಿ ಲೆಡೆಕಿ ಅವರು ಶನಿವಾರ ನಡೆಯಲಿರುವ 800 ಮೀಟರ್‌ ಫ್ರೀಸ್ಟೈಲ್‌ ಫೈನಲ್‌ನಲ್ಲಿ ಮತ್ತೆ ಮುಖಾಮುಖಿಯಾಗಿದ್ದಾರೆ.  28 ವರ್ಷದ ಅಮೆರಿಕದ ಲೆಡೆಕಿ ಈ ಸ್ಪರ್ಧೆಯಲ್ಲಿ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಮೇ ತಿಂಗಳಲ್ಲಿ ತಮ್ಮದೇ ವಿಶ್ವದಾಖಲೆಯನ್ನು ಉತ್ತಮ ಪಡಿಸಿರುವ ಅವರು ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಅವರಿಗಿಂತ 10 ವರ್ಷ ಕಿರಿಯ ಈಜುಪಟು ಮೆಕಿಂಟೋಷ್‌ ಇಲ್ಲಿ ವೈಯಕ್ತಿಕ ವಿಭಾಗದಲ್ಲಿ ಐದು ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ. ಈಗಾಗಲೇ ಮೂರು ಚಿನ್ನ ಗೆದ್ದಿರುವ ಅವರು ಲೆಡೆಕಿ ಅವರಿಗೆ ಸವಾಲೊಡ್ಡಲು ಸಜ್ಜಾಗಿದ್ದಾರೆ.  ಭಾನುವಾರ 400 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಮೆಕಿಂಟೋಷ್‌ ಚಿನ್ನ ಗೆದ್ದರೆ ಲೆಡೆಕಿ ಕಂಚು ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.