ADVERTISEMENT

ಕ್ವಾರಂಟೈನ್‌ ಅವಧಿಯು ಮಾನಸಿಕ ಸಾಮರ್ಥ್ಯಕ್ಕೆ ಸವಾಲು: ಎಸ್‌.ವಿ.ಸುನಿಲ್‌

ಪಿಟಿಐ
Published 17 ಆಗಸ್ಟ್ 2020, 15:44 IST
Last Updated 17 ಆಗಸ್ಟ್ 2020, 15:44 IST
ಎಸ್‌.ವಿ.ಸುನಿಲ್‌
ಎಸ್‌.ವಿ.ಸುನಿಲ್‌   

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕಳೆದ 14 ದಿನಗಳ ಕ್ವಾರಂಟೈನ್‌ ಅವಧಿಯು ನಮ್ಮ ಮಾನಸಿಕ ಸಾಮರ್ಥ್ಯ ಮತ್ತು ತಾಳ್ಮೆಗೆ ಪರೀಕ್ಷೆಯಾಗಿತ್ತು ಎಂದು ಭಾರತ ಹಾಕಿ ತಂಡದ ಆಟಗಾರ, ಕನ್ನಡಿಗ ಎಸ್‌.ವಿ.ಸುನಿಲ್‌ ಹೇಳಿದ್ದಾರೆ. ಹಾಕಿ ತಂಡಗಳ ಆಟಗಾರರು ಹಾಗೂ ಆಟಗಾರ್ತಿಯರು ಬುಧವಾರದಿಂದ ನಡೆಯಲಿರುವ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿದ್ದಾರೆ.

‘ಗುಂಪಿನ ಪ್ರತಿಯೊಬ್ಬ ಸದಸ್ಯರು ದೀರ್ಘಕಾಲದವರೆಗೆ ಪ್ರತ್ಯೇಕವಾಗಿ ಇರುವ ಸವಾಲು ಎದುರಿಸಲು ಮಾನಸಿಕ ಸದೃಢತೆ ಮುಖ್ಯವಾಗಿದೆ ಎಂಬುದನ್ನು ಅರಿತುಕೊಂಡೆವು. ಕ್ವಾರಂಟೈನ್‌ ಅವಧಿಯಲ್ಲಿ ಕುಟುಂಬ, ಮಿತ್ರರು ಹಾಗೂ ಸಹ ಆಟಗಾರರೊಂದಿಗೆ ಯಾವಾಗಲೂ ಸಂಪರ್ಕದಲ್ಲಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು 31 ವರ್ಷದ ಸುನಿಲ್‌ನುಡಿದರು.

‘ನಮ್ಮ ಮಾನಸಿಕ ಸಾಮರ್ಥ್ಯಕ್ಕೆ ಈ ಅವಧಿ ದೊಡ್ಡ ಸವಾಲು. ನಮ್ಮ ತಾಳ್ಮೆಯನ್ನು ಇದು ಪರೀಕ್ಷೆಗೆ ಒಳಪಡಿಸುತ್ತದೆ’ ಎಂದು ಹೇಳಿದರು.

ADVERTISEMENT

ಭಾರತದ ಎರಡೂ ಹಾಕಿ ತಂಡಗಳ (ಪುರುಷ ಹಾಗೂ ಮಹಿಳಾ) ಆಟಗಾರರು ಸದ್ಯ 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ. ಬಿಡುವಿನ ವೇಳೆ ಮನೆಗೆ ತೆರಳಿದ್ದ ಅವರು ಸದ್ಯ ತರಬೇತಿ ಶಿಬಿರಕ್ಕಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರಕ್ಕೆ ಮರಳಿದ್ದಾರೆ.

‘ನಮ್ಮನ್ನು ನಾವು ಸದಾ ಯಾವುದಾದರೂ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾಕೆಂದರೆ ದಿನವಿಡೀ ಟಿವಿ ಮುಂದೆ ಅಥವಾ ಮೊಬೈಲ್‌ನಲ್ಲಿ ಕಾಲ ಕಳೆಯಲಾಗುವುದಿಲ್ಲ. ಹೀಗಾಗಿ ತಂಡದ ಮುಖ್ಯ ಕೋಚ್‌ ಹಾಗೂ ನೆರವು ಸಿಬ್ಬಂದಿ ನಮ್ಮನ್ನು ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುತ್ತಿದ್ದರು. ನಮಗೆ ವಿಡಿಯೊ ಕರೆಗಳನ್ನು ಮಾಡಿ, ಒಲಿಂಪಿಕ್ಸ್‌ನಲ್ಲಿ‌ ಸಾಧನೆಗೈದ ಅಥ್ಲೀಟ್‌ಗಳ ಕುರಿತು ತಿಳಿದುಕೊಳ್ಳಲು ಹೇಳಲಾಗುತ್ತಿತ್ತು‘ ಎಂದು ಸುನಿಲ್‌ ನುಡಿದರು.

ಸುರಕ್ಷಿತವಾಗಿ ತರಬೇತಿಗೆ ತೆರಳಲು ಅನುಕೂಲ ಮಾಡಿಕೊಡುತ್ತಿರುವ ಸಾಯ್‌ ಹಾಗೂ ಹಾಕಿ ಇಂಡಿಯಾ ಆಡಳಿತಗಳಿಗೆ ಅವರು ಧನ್ಯವಾದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.