ADVERTISEMENT

ಟ್ರ್ಯಾಕ್‌ನಲ್ಲಿ ಅವಘಡ: ರೇಸ್‌ ಸ್ಪರ್ಧಿ ಕುಮಾರ್‌ ಸಾವು

ಚೆನ್ನೈನಲ್ಲಿ ನಡೆದ ಕಾರು ರೇಸಿಂಗ್‌ ವೇಳೆ ಅಪಘಾತ

ಪಿಟಿಐ
Published 8 ಜನವರಿ 2023, 19:31 IST
Last Updated 8 ಜನವರಿ 2023, 19:31 IST
ಕೆ.ಇ.ಕುಮಾರ್
ಕೆ.ಇ.ಕುಮಾರ್   

ಚೆನ್ನೈ: ರೇಸಿಂಗ್‌ ವಲಯದಲ್ಲಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ಕಾರು ರೇಸ್‌ ಸ್ಪರ್ಧಿ ಕೆ.ಇ.ಕುಮಾರ್‌ ಅವರು ಭಾನುವಾರ ರೇಸಿಂಗ್‌ ವೇಳೆ ನಡೆದ ಅವಘಡದಲ್ಲಿ ಮೃತಪಟ್ಟಿದ್ದಾರೆ.

59 ವರ್ಷದ ಕುಮಾರ್‌, ಚೆನ್ನೈನ ಮದ್ರಾಸ್‌ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ನಡೆದ ಎಂಆರ್‌ಎಫ್‌ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್‌ ನ್ಯಾಷನಲ್‌ ಕಾರು ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು.

ಭಾನುವಾರ ಬೆಳಿಗ್ಗೆ ನಡೆದ ‘ಸಲೂನ್‌ ಕಾರು’ ವಿಭಾಗದ ಸ್ಪರ್ಧೆಯ ವೇಳೆ ದುರಂತ ಸಂಭವಿಸಿದೆ. ಕುಮಾರ್‌ ಚಾಲನೆ ಮಾಡುತ್ತಿದ್ದ ಕಾರು ಸಹ ಸ್ಪರ್ಧಿಯ ಕಾರಿಗೆ ಡಿಕ್ಕಿಯಾಗಿ ಜಾರಿಕೊಂಡು ಟ್ರ್ಯಾಕ್‌ನಿಂದ ಹೊರಕ್ಕೆ ಹೋಗಿದೆ. ಆ ಬಳಿಕ ರಭಸದಿಂದ ತಡೆಗೋಡೆಗೆ ಅಪ್ಪಳಿಸಿ ಪಲ್ಟಿಯಾಗಿದೆ.

ADVERTISEMENT

ಗಂಭೀರ ಗಾಯಗೊಂಡಿದ್ದ ಕುಮಾರ್‌ ಅವರಿಗೆ ಟ್ರ್ಯಾಕ್‌ನಲ್ಲಿರುವ ವೈದ್ಯಕೀಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆ ಬಳಿಕ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ಅಲ್ಲಿ ನಿಧನರಾದರು.

‘ಇದು ಅತ್ಯಂತ ದುರದೃಷ್ಟಕರ ಘಟನೆ. ಕುಮಾರ್‌ ಅನುಭವಿ ರೇಸರ್‌ ಆಗಿದ್ದಾರೆ. ಒಬ್ಬ ಸ್ಪರ್ಧಿ ಹಾಗೂ ಗೆಳೆಯನಾಗಿ ನಾನು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಎಂಎಂಎಸ್‌ಸಿ ಹಾಗೂ ಇಡೀ ರೇಸಿಂಗ್‌ ವಲಯವು ಅವರ ನಿಧನಕ್ಕೆ ಸಂತಾಪ ಸೂಚಿಸುತ್ತದೆ’ ಎಂದು ಇಂಡಿಯನ್‌ ನ್ಯಾಷನಲ್‌ ಕಾರು ರೇಸಿಂಗ್‌ ಚಾಂಪಿ ಯನ್‌ಷಿಪ್‌ನ ಮುಖ್ಯಸ್ಥ ವಿಕ್ಕಿ ಚಾಂಧೋಕ್‌ ಹೇಳಿದ್ದಾರೆ.

ಎಫ್‌ಎಂಎಸ್‌ಸಿಐ ಹಾಗೂ ಈ ರೇಸಿಂಗ್‌ನ ಸಂಘಟಕರಾದ ಎಂಎಂಎಸ್‌ಸಿ, ದುರ್ಘಟನೆ ಬಗ್ಗೆ ತನಿಖೆ ಆರಂಭಿಸಿದೆ ಎಂದಿದ್ದಾರೆ.

ಅಪಘಾತ ನಡೆದ ಕೂಡಲೇ ಇಡೀ ದಿನದ ರೇಸ್‌ಗಳನ್ನು ರದ್ದುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.