ADVERTISEMENT

ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಮಣಿಸಿದ ಗುಜರಾತ್

ಪ್ರೊ ಕಬಡ್ಡಿ ಲೀಗ್‌: ದಬಂಗ್ ಡೆಲ್ಲಿಗೂ ಜಯ; ರೇಡಿಂಗ್‌ನಲ್ಲಿ ಮಿಂಚಿದ ಅಜಯ್, ಪ್ರದೀಪ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 17:19 IST
Last Updated 31 ಜನವರಿ 2022, 17:19 IST
ಗುಜರಾತ್ ಜೈಂಟ್ಸ್‌ನ ರೇಡರ್ ಅಜಯ್ ಕುಮಾರ್‌ ಅವರನ್ನು ಹಿಡಿಯಲು ವ್ಯರ್ಥ ಪ್ರಯತ್ನ ನಡೆಸಿದ ಹರಿಯಾಣ ಸ್ಟೀಲರ್ಸ್‌ನ ಸುರೇಂದರ್ ನಾಡ
ಗುಜರಾತ್ ಜೈಂಟ್ಸ್‌ನ ರೇಡರ್ ಅಜಯ್ ಕುಮಾರ್‌ ಅವರನ್ನು ಹಿಡಿಯಲು ವ್ಯರ್ಥ ಪ್ರಯತ್ನ ನಡೆಸಿದ ಹರಿಯಾಣ ಸ್ಟೀಲರ್ಸ್‌ನ ಸುರೇಂದರ್ ನಾಡ   

ಬೆಂಗಳೂರು: ರೇಡರ್ ಜೋಡಿ ಅಜಯ್ ಕುಮಾರ್ ಮತ್ತು ಪ್ರದೀಪ್ ಕುಮಾರ್ ಅವರು ಮಿಂಚಿನ ಆಟವಾಡಿದರು. ಅಜಯ್‌ ಅವರ ‘ಸೂಪರ್ ಟೆನ್‌’ ಮತ್ತು ಪ್ರದೀಪ್‌ ಆಲ್‌ರೌಂಡ್‌ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸೋಮವಾರ ಗೆಲುವು ದಾಖಲಿಸಿತು.

ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್‌ ಗ್ರ್ಯಾಂಡ್‌ನಲ್ಲಿ ನಡೆದ ಹಣಾಹಣಿಯಲ್ಲಿ ತಂಡ 32–26ರಲ್ಲಿ ಹರಿಯಾಣ ಸ್ಟೀಲರ್ಸ್ ಎದುರು ಜಯಭೇರಿ ಮೊಳಗಿಸಿತು. ಮೊದಲ ನಿಮಿಷದಲ್ಲೇ ಆಧಿಪತ್ಯ ಸ್ಥಾಪಿಸಿದ ಗುಜರಾತ್ ತಂಡ ಎದುರಾಳಿ ಡಿಫೆಂಡರ್‌ಗಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಅಜಯ್‌ ಕುಮಾರ್ 9 ಟಚ್ ಪಾಯಿಂಟ್‌ ಸೇರಿದಂತೆ 11 ಪಾಯಿಂಟ್ ಗಳಿಸಿದರೆ ಪ್ರದೀಪ್ ಒಂದು ಟ್ಯಾಕಲ್ ಪಾಯಿಂಟ್ ಸೇರಿದಂತೆ 10 ಪಾಯಿಂಟ್ ಕಲೆ ಹಾಕಿದರು.

ಗುಜರಾತ್ ತಂಡದ ಡಿಫೆಂಡರ್‌ಗಳು ಕೂಡ ಅತ್ಯುತ್ತಮ ಆಟ ಪ್ರದರ್ಶಿಸಿದರು. ರವೀಂದ್ರ ಪೆಹಲ್‌ ಹಾಗೂ ಗಿರೀಶ್ ಎರ್ನಕ್ ತಂಡದ ರೇಡರ್‌ಗಳ ಆಟಕ್ಕೆ ಉತ್ತಮ ಬೆಂಬಲ ನೀಡಿದರು. ಸ್ಟೀಲರ್ಸ್‌ಗೆ ಕೇವಲ ಐದು ಟ್ಯಾಕಲ್ ಪಾಯಿಂಟ್ ಗಳಿಸಲು ಸಾಧ್ಯವಾಯಿತು. ನಾಯಕ ವಿಕಾಸ್ ಖಂಡೋಲ ರೇಡಿಂಗ್‌ನಲ್ಲಿ ಏಳು ಪಾಯಿಂಟ್ ತಂದುಕೊಟ್ಟರು. ಮೀತು ಎಂಟು ಮತ್ತು ರೋಹಿತ್ ಗುಲಿಯಾ ನಾಲ್ಕು ಪಾಯಿಂಟ್ ಗಳಿಸಿದರು.

ADVERTISEMENT

ದಬಂಗ್ ಜಯಭೇರಿ

ಮತ್ತೊಂದು ಪಂದ್ಯದಲ್ಲಿ ದಬಂಗ್ ಡೆಲ್ಲಿ ತಂಡ ಯು ಮುಂಬಾವನ್ನು 36–30ರಲ್ಲಿ ಮಣಿಸಿತು. ಆಲ್‌ರೌಂಡರ್ ವಿಜಯ್ ಆರು ಬೋನಸ್ ಮತ್ತು ಒಂದು ಟ್ಯಾಕಲ್ ಸೇರಿದಂತೆ 12 ಪಾಯಿಂಟ್ ತಂದುಕೊಟ್ಟರು. ಆಶು ಮಲಿಕ್ ಎಂಟು, ಮಂಜಿತ್ ಚಿಲ್ಲರ್ ನಾಲ್ಕು, ನೀರಜ್ ನರ್ವಾಲ್ ಆರು ಪಾಯಿಂಟ್ ಗಳಿಸಿದರು. ಮುಂಬಾ ಪರ ಅಭಿಷೇಕ್‌ ಎಂಟು, ಶಿವಂ ಆರು ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.