ADVERTISEMENT

Swiss Open | ಪ್ರಿಕ್ವಾರ್ಟರ್‌ಗೆ ರಾಜಾವತ್, ಮುತ್ತುಸ್ವಾಮಿ; ಸಿಂಧು ನಿರ್ಗಮನ

ಸ್ವಿಸ್ ಓಪನ್‌: ಮೊದಲ ಸುತ್ತಿನಲ್ಲಿ ಸಿಂಧು ನಿರ್ಗಮನ

ಪಿಟಿಐ
Published 20 ಮಾರ್ಚ್ 2025, 12:25 IST
Last Updated 20 ಮಾರ್ಚ್ 2025, 12:25 IST
<div class="paragraphs"><p>ಪಿ.ವಿ. ಸಿಂಧು</p></div>

ಪಿ.ವಿ. ಸಿಂಧು

   

– ರಾಯಿಟರ್ಸ್ ಚಿತ್ರ

ಬಾಸೆಲ್‌: ಭಾರತದ ಪ್ರಿಯಾಂಶು ರಾಜಾವತ್ ಅವರು ನೇರ ಆಟಗಳಿಂದ ಸ್ಥಳೀಯ ಆಟಗಾರ ಟೊಬಿಯಾಸ್ ಕುಯೆಂಝಿ ಅವರನ್ನು ಬಗ್ಗುಬಡಿದು ಸ್ವಿಸ್‌ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್ ತಲುಪಿದರು.

ADVERTISEMENT

ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಪ್ರಿಯಾಂಶು ಅವರು 21–10, 21–11 ರಿಂದ ಗೆಲ್ಲಲು ತೆಗೆದುಕೊಂಡಿದ್ದು ಬರೇ 29 ನಿಮಿಷಗಳನ್ನಷ್ಟೇ. ವಿಶ್ವ ಕ್ರಮಾಂಕದಲ್ಲಿ 35ನೇ ಸ್ಥಾನದಲ್ಲಿರುವ ಭಾರತದ ಆಟಗಾರ, ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಟೋಮಾ ಜೂನಿಯರ್ ಪೊಪೊವ್ ಅವರನ್ನು ಎದುರಿಸಲಿದ್ದಾರೆ.

ಎಸ್‌.ಶಂಕರ್‌ ಮುತ್ತುಸ್ವಾಮಿ ಸುಬ್ರಮಣಯನ್ ಕೂಡ ಮುಂದಿನ ಸುತ್ತನ್ನು ತಲುಪಿದರು. ಅವರು ಡೆನ್ಮಾರ್ಕ್‌ನ ಮ್ಯಾಗ್ನಸ್‌ ಯೊಹಾನ್ಸೆನ್‌ ಅವರನ್ನು 21–5, 21–16 ರಿಂದ ಸೋಲಿಸಿದರು. ಅವರು ಗುರುವಾರ ತಡರಾತ್ರಿ ನಡೆಯುವ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಆಂಡರ್ಸ್‌ ಅಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ.

‌ಭಾರತದ ಇನ್ನೊಬ್ಬ ಆಟಗಾರ ಕಿರಣ್ ಜಾರ್ಜ್ ಅವರ ಸವಾಲು ಅಂತ್ಯಗೊಂಡಿತು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ 21–18, 17–21, 10–21ರಲ್ಲಿ ರಸ್ಮಸ್‌ ಗೆಮ್ಕೆ ಅವರನ್ನು ಹಿಮ್ಮೆಟ್ಟಿಸಿದರು.

ಸಿಂಧು ನಿರ್ಗಮನ:

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ, ಏಳನೇ ಶ್ರೇಯಾಂಕದ ಪಿ.ವಿ. ಸಿಂಧು ಅವರ ಕಳಪೆ ಓಟ ಮುಂದುವರಿಯಿತು. ಅವರು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಭಾರತದ ಆಟಗಾರ್ತಿ ತಮಗಿಂತ ಕೆಳಕ್ರಮಾಂಕದ ಡೆನ್ಮಾರ್ಕ್‌ನ ಆಟಗಾರ್ತಿ ಜೂಲಿ ಜಾಕೊಬ್ಸೆನ್ ಎದುರು 17–21, 19–21 ರಲ್ಲಿ ಸೋಲನುಭವಿಸಿದರು.

ಭಾರತೀಯರ ವ್ಯವಹಾರವಾಗಿದ್ದ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಅನುಪಮಾ ಉಪಾಧ್ಯಾಯ 21–14, 21–13ರಲ್ಲಿ ಅನ್ಮೋಲ್ ಖಾರ್ಬ್ ಅವರನ್ನು ಸೋಲಿಸಿದರು. ಅವರ ಮುಂದಿನ ಎದುರಾಳಿ ನಾಲ್ಕನೇ ಶ್ರೇಯಾಂಕದ ಪುತ್ರಿ ಕುಸಮವರ್ದನಿ (ಇಂಡೊನೇಷ್ಯಾ).

ಸತೀಶ್ ಕುಮಾರ್ ಕರುಣಾಕರನ್– ಆದ್ಯಾ ವಾರಿಯತ್ ಜೋಡಿ ಮಿಶ್ರ ಬಡಲ್ಸ್‌ ವಿಭಾಗದಲ್ಲಿ ಎರಡನೇ ಸುತ್ತಿಗೆ ಮುನ್ನಡೆಯಿತು. ಭಾರತದ ಜೋಡಿ 21–15, 22–20 ರಿಂದ ಅಲ್ಜೀರಿಯಾದ ಟನಿನಾ ವಯೊಲೆಟ್‌ ಮಮ್ಮೇರಿ– ಕೊಸೀಲಾ ಮಮ್ಮೇರಿ ಜೋಡಿಯನ್ನು ಹಿಮ್ಮೆಟ್ಟಿಸಿತು.

ಮುಂದಿನ ಸುತ್ತಿನಲ್ಲಿ ಚೀನಾ ತೈಪಿಯ ಕುವಾಂಗ್‌ ಹೆಂಗ್ ಲಿಯು– ಯು ಚೀಯ ಜೆಂಗ್ ಜೋಡಿಯನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.