ADVERTISEMENT

ರ‍್ಯಾಪಿಡ್ ಚೆಸ್ ಟೂರ್ನಿ: ಸಾಯಿ ಅಗ್ನಿಗೆ ‘ಪ್ರಶಸ್ತಿ ಡಬಲ್’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 15:52 IST
Last Updated 1 ಫೆಬ್ರುವರಿ 2026, 15:52 IST
ಬ್ಲಿಟ್ಝ್‌ನಲ್ಲಿ ಚಾಂಪಿಯನ್ ಆದ ಸಾಯಿ ಅಗ್ನಿ ಜೀವಿತೇಶ್ (ಮಧ್ಯ), ರನ್ನರ್ ಅಪ್ ಅರುಲ್ ಆನಂದ್ (ಎಡ) ಮತ್ತು 3ನೇ ಸ್ಥಾನ ಗಳಿಸಿದ ಲಕ್ಷಿತ್ ಸಾಲಿಯಾನ್ 
ಬ್ಲಿಟ್ಝ್‌ನಲ್ಲಿ ಚಾಂಪಿಯನ್ ಆದ ಸಾಯಿ ಅಗ್ನಿ ಜೀವಿತೇಶ್ (ಮಧ್ಯ), ರನ್ನರ್ ಅಪ್ ಅರುಲ್ ಆನಂದ್ (ಎಡ) ಮತ್ತು 3ನೇ ಸ್ಥಾನ ಗಳಿಸಿದ ಲಕ್ಷಿತ್ ಸಾಲಿಯಾನ್     

ಬೆಳ್ತಂಗಡಿ (ದಕ್ಷಿಣ ಕನ್ನಡ): ಇಂಟರ್‌ನ್ಯಾನಷಲ್ ಮಾಸ್ಟರ್‌, ತೆಲಂಗಾಣದ ಸಾಯಿ ಅಗ್ನಿ ಜೀವಿತೇಶ್ ಇಲ್ಲಿ ನಡೆದ ಫಿಡೆ ರೇಟೆಡ್‌ ‘ಎಸ್‌ಡಿಎಂ–ಆರ್‌ಸಿಸಿ ರೋಟೊ ಲಾಯರ್ಸ್‌’ ಅಂತರರಾಷ್ಟ್ರೀಯ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರಿನ ರಾವ್ಸ್ ಚೆಸ್ ಕಾರ್ನರ್, ಬೆಳ್ತಂಗಡಿ ವಕೀಲರ ಸಂಘ, ರೋಟರಿ ಸಂಸ್ಥೆ ಮತ್ತು ಎಸ್‌ಡಿಎಂ ಸೊಸೈಟಿ ಆಯೋಜಿಸಿದ್ದ ಟೂರ್ನಿಯ ರ‍್ಯಾಪಿಡ್ ವಿಭಾಗದಲ್ಲಿ  ತೆಲಂಗಾಣದ ಭಾವನ್ ಕೊಲ್ಲ ಮತ್ತು ಬ್ಲಿಟ್ಝ್‌ನಲ್ಲಿ ಕರ್ನಾಟಕದ ಆರುಲ್ ಆನಂದ್ ರನ್ನರ್ ಅಪ್ ಆದರು. ಅಗ್ರಶ್ರೇಯಾಂಕಿತ  ಆಟಗಾರ, ಇಂಟರ್‌ನ್ಯಾಷನಲ್ ಮಾಸ್ಟರ್ ತೆಲಂಗಾಣದ ಚಕ್ರವರ್ತಿ ರೆಡ್ಡಿ ಎರಡೂ ವಿಭಾಗದಲ್ಲಿ 4ನೇ ಸ್ಥಾನ ಪಡೆದರು.

10 ಸುತ್ತುಗಳ ರ‍್ಯಾಪಿಡ್‌ನಲ್ಲಿ 9 ಪಾಯಿಂಟ್ ಗಳಿಸಿದ ಸಾಯಿ ಅಗ್ನಿ ₹35 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು. ಭಾವನ್ ಕೊಲ್ಲ ₹20 ಸಾವಿರ ಮತ್ತು ಟ್ರೋಫಿ, ಮೂರನೇ ಸ್ಥಾನ ಗಳಿಸಿದ ತಮಿಳುನಾಡಿನ ಭಾರತಿ ಮಣಿ ₹15 ಸಾವಿರ ಮತ್ತು ಟ್ರೋಫಿ ಗಳಿಸಿದರು. ಚಕ್ರವರ್ತಿ ₹10 ಸಾವಿರ ನಗದು ಗಳಿಸಿದರು. ಭಾವನ್‌, ಭಾರತಿ, ಚಕ್ರವರ್ತಿ, ಕರ್ನಾಟಕದ ಶ್ರೀಯಾಂಶ್ ಸಿನ್ಹಾ ಮತ್ತು ಅರುಲ್ ಆನಂದ್‌ ತಲಾ 8 ಪಾಯಿಂಟ್ ಗಳಿಸಿದರು. ಕರ್ನಾಟಕದ ಲಕ್ಷಿತ್ ಸಾಲಿಯಾನ್‌, ಸ್ವರ ಲಕ್ಷ್ಮಿ ನಾಯರ್, ನಿಹಾಲ್ ಶೆಟ್ಟಿ ಮತ್ತು ಶೇಕ್ ಮಹಮ್ಮದ್ ಇರ್ಫಾನ್‌ 7.5 ಪಾಯಿಂಟ್ ಗಳಿಸಿದರು. 

ADVERTISEMENT

ಬ್ಲಿಟ್ಝ್‌ನಲ್ಲಿ ಸಾಯಿ 11 ಪಾಯಿಂಟ್ ಗಳಿಸಿದರೆ ಅರುಲ್ ಆನಂದ್ 10.5 ಪಾಯಿಂಟ್ ಕಲೆ ಹಾಕಿದರು. ದಕ್ಷಿಣ ಕನ್ನಡದ ಲಕ್ಷಿತ್ ಸಾಲಿಯಾನ್ 10 ಪಾಯಿಂಟ್ ಗಳಿಸಿದರು. ಈ ಮೂವರಿಗೆ ಟ್ರೋಫಿಯೊಂದಿಗೆ ಕ್ರಮವಾಗಿ ₹25 ಸಾವಿರ, ₹15 ಸಾವಿರ ಮತ್ತು ₹10 ಸಾವಿರ ನಗದು ಬಹುಮಾನ ನೀಡಲಾಯಿತು. ಚಕ್ರವರ್ತಿ ರೆಡ್ಡಿ ಕೂಡ 10 ಪಾಯಿಂಟ್ ಗಳಿಸಿದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.