ADVERTISEMENT

ಆರ್‌ಸಿಸಿ ಫಿಡೆ ರೇಟೆಡ್ ಕ್ಲಾಸಿಕಲ್ ಚೆಸ್: ಐಎಂ ಆಟಗಾರನಿಗೆ ಸೋಲುಣಿಸಿದ ಆದಿತ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 16:19 IST
Last Updated 26 ಸೆಪ್ಟೆಂಬರ್ 2025, 16:19 IST
ಆದಿತ್ಯ ಎಸ್‌.
ಆದಿತ್ಯ ಎಸ್‌.   

ಮಂಗಳೂರು: ರೋಚಕ ಕ್ಷಣಗಳಿಗೆ ಸಾಕ್ಷಿಯಾದ ತಮಿಳುನಾಡಿನ ಇಬ್ಬರು ಆಟಗಾರರ ನಡುವಿನ ಪೈಪೋಟಿಯಲ್ಲಿ ಇಂಟರ್‌ ನ್ಯಾಷನಲ್ ಮಾಸ್ಟರ್‌ (ಐಎಂ), ಮೂರನೇ ಶ್ರೇಯಾಂಕಿತ ಸರವಣ ಕೃಷ್ಣನ್ ಸೋಲುಂಡರು. ಅವರ ವಿರುದ್ಧ ಕೆಚ್ಚೆದೆಯ ಆಟವಾಡಿದ ಆದಿತ್ಯ ಎಸ್‌ ಮುನ್ನಡೆ ಸಾಧಿಸಿದರು. 5ನೇ ಶ್ರೇಯಾಂಕಿತ ಆಟಗಾರನ ವಿರುದ್ಧ ರೆಜಿತ್ ರಂಜಿತ್ ಮೇಲುಗೈ ಸಾಧಿಸಿದರು.  

ರಾವ್ಸ್‌ ಚೆಸ್ ಕಾರ್ನರ್, ನಗರದ ಶಾರದಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಗ್ರ್ಯಾಂಡ್ ಆರ್‌ಸಿಸಿ ಫಿಡೆ ರೇಟೆಡ್ ಕ್ಲಾಸಿಕಲ್‌ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ‌ಲ್ಲಿ ಶುಕ್ರವಾರ ನಾಲ್ಕು ಸುತ್ತುಗಳ ಮುಕ್ತಾಯಕ್ಕೆ 14 ಮಂದಿ ತಲಾ 4 ಪಾಯಿಂಟ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾದ ಆಂಧ್ರಪ್ರದೇಶದ ಎಂ.ಡಿ. ಇಮ್ರಾನ್ ಮತ್ತು ತಮಿಳುನಾಡಿನ ಮುರಳಿಕೃಷ್ಣ ಬಿ.ಟಿ ಈ ಪಟ್ಟಿಯಲ್ಲಿದ್ದಾರೆ.

ಮೂರು ಸುತ್ತುಗಳಲ್ಲಿ ಅಜೇಯರಾಗಿದ್ದ ಆದಿತ್ಯ ಮತ್ತು ಸರವಣ ಶುಕ್ರವಾರ ಸಂಜೆ ನಾಲ್ಕನೇ ಸುತ್ತಿನಲ್ಲಿ ತುರುಸಿನ ಪೈಪೋಟಿ ನಡೆಸಿದರು. 2307 ರೇಟಿಂಗ್‌ ಪಾಯಿಂಟ್‌ಗಳು ಹೊಂದಿರುವ ಸರವಣನ್‌ಗೆ 3ನೇ ಶ್ರೇಯಾಂಕ ನೀಡಲಾಗಿದೆ. ಶ್ರೇಯಾಂಕ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿರುವ ಅದಿತ್ಯ (ರೇಟಿಂಗ್‌ 1841) ಅವರಿಗೆ ಆರಂಭದಲ್ಲಿ ಸರವಣನ್‌ ಸಮಬಲದ ಪೈಪೋಟಿ ನೀಡಿದ್ದರು. ನಂತರ ಚಾಕಚಕ್ಯ ಆಟವಾಡಿದ ಆದಿತ್ಯ ಎದುರಾಳಿಯನ್ನು ದಂಗುಬಡಿಸಿದರು. ಅವಕಾಶಗಳನ್ನು ಸದುಪಯೋಗ ಮಾಡಿಕೊಂಡ ಅವರು ಕೊನೆಯಲ್ಲಿ ಭರವಸೆಯಿಂದ ಮುನ್ನಡೆದು ಜಯ ತಮ್ಮದಾಗಿಸಿಕೊಂಡರು. 

ADVERTISEMENT

ಕ್ಯಾಂಡಿಡೇಟ್ ಮಾಸ್ಟರ್‌, 5ನೇ ಶ್ರೇಯಾಂಕದ ಹರಿಯಾಣ ಆಟಗಾರ ನಿಮಯ್ ಅಗರವಾಲ್ ಮತ್ತು ರೆಜಿತ್ ರಂಜಿತ್ ನಡುವಿನ ಪಂದ್ಯವೂ ಕುತೂಹಲದಿಂದ ಕೂಡಿತ್ತು. 1835 ರೇಟಿಂಗ್ ಹೊಂದಿರುವ ರೆಜಿತ್ 2208 ರೇಟಿಂಗ್‌ನ ನಿಮಯ್ ಎದುರು ಎಚ್ಚರಿಕೆಯ ಮತ್ತು ನಿಖರ ಲೆಕ್ಕಾಚಾರದ ನಡೆಗಳನ್ನು ಪ್ರದರ್ಶಿಸಿ ಪೂರ್ಣ ಅಂಕ ಬಗಲಿಗೆ ಹಾಕಿಕೊಂಡರು.

7ನೇ ಶ್ರೇಯಾಂಕಿತ, ಮುರಳಿಕೃಷ್ಣ 4ನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ಧನುಷ್ ರಾಮ್ ಎಂ ವಿರುದ್ಧ ಜಯ ಗಳಿಸಿದರು. 2ನೇ ಶ್ರೆಯಾಂಕಿತ, ಗೋವಾದ ಲಾಡ್ ಮಂದಾರ್ ಪ್ರದೀಪ್ ತಮಿಳುನಾಡಿನ ಕನಿಷ್ಕ ಜೊತೆ ಡ್ರಾ ಮಾಡಿಕೊಂಡು 3.5 ಪಾಯಿಂಟ್‌ಗಳಿಗೆ ಕುಸಿದರು. ಕರ್ನಾಟಕದ ಪಂಕಜ್ ಭಟ್ (ದಕ್ಷಿಣ ಕನ್ನಡ), ಅದ್ವೈತ್ ರತ್ನಾಕರ್ ವಿಭೂತೆ, ಪ್ರಣವ್ ಎ.ಜೆ ಮತ್ತು ನಂದಕುಮಾರ್ ಎಸ್‌, ಮಣಿಪುರದ ವಿಕ್ರಂ ಜೀತ್ ಸಿಂಗ್‌, ರೈಲ್ವೆಯ ಅರ್ಜುನ್ ತಿವಾರಿ, ಕೇರಳದ ನಿತಿನ್ ಬಾಬು, ತಮಿಳುನಾಡಿನ ನಿಖಿಲ್ ಟಿ.ಎಲ್‌, ಕೇರಳದ ಸಂದೀಪ್ ಸಂತೋಷ್‌ ಮತ್ತು ತಮಿಳುನಾಡಿನ ಕಿಶೋರ್ ವಿ ಅವರೂ 4 ಸುತ್ತುಗಳಲ್ಲಿ ಜಯ ಸಾಧಿಸಿದ್ದಾರೆ.     

ಪಂಕಜ್ ಭಟ್‌

ಹಿಂದೆ ಸರಿದ ಇಮ್ರಾನ್‌? 

ಟೂರ್ನಿಯ ಅಗ್ರ ಶ್ರೇಯಾಂಕಿತ ಆಟಗಾರ ಎಂ.ಡಿ ಇಮ್ರಾನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಒಂದನೇ ಬೋರ್ಡ್‌ನಲ್ಲಿ ಆಡುತ್ತಿದ್ದ ಅವರು ಗುರುವಾರ ಎರಡು ಸುತ್ತುಗಳಲ್ಲೂ ಜಯ ಗಳಿಸಿ ಐದನೇ ಸ್ಥಾನದಲ್ಲಿದ್ದರು. ಶುಕ್ರವಾರ ಮೂರನೇ ಸುತ್ತಿನಲ್ಲಿ ಗೆಲುವಿನೊಂದಿಗೆ ಅಗ್ರ ಸ್ಥಾನಕ್ಕೇರಿದ್ದರು. ನಂತರದ ಸುತ್ತಿನಲ್ಲಿ ಕೇರಳದ ಅಮೇಯ ಆರ್‌ (1864 ರೇಟಿಂಗ್‌) ವಿರುದ್ಧ ಜಯ ಗಳಿಸಿ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು. ಆದರೆ ನಾಲ್ಕನೇ ಸುತ್ತು ಮುಕ್ತಾಯದ ನಂತರ ಅವರು ವಾಪಸ್ ತೆರಳಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ‘ದಿನದ ಎರಡೂ ಸುತ್ತುಗಳನ್ನು ಆಡಿ ವೈಯಕ್ತಿಕ ಕಾರಣಗಳಿಂದ ಅವರು ವಾಪಸ್ ಹೋಗಿದ್ದಾರೆ’ ಎಂದು ಸಂಘಟಕರು ಹೇಳಿದ್ದಾರೆ. ಇಮ್ರಾನ್ 2476 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.