ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಕಾಮಗಾರಿ; ಅಥ್ಲೀಟ್‌ಗಳಿಗೆ ತೊಂದರೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:20 IST
Last Updated 4 ಆಗಸ್ಟ್ 2022, 21:20 IST
ಕಂಠೀರವ ಕ್ರೀಡಾಂಗಣದ ಹುಲ್ಲಿನ ಅಂಕಣದಲ್ಲಿ ಮರಳು ಸುರಿದಿರುವುದು
ಕಂಠೀರವ ಕ್ರೀಡಾಂಗಣದ ಹುಲ್ಲಿನ ಅಂಕಣದಲ್ಲಿ ಮರಳು ಸುರಿದಿರುವುದು   

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಕೋಚ್‌ಗಳು ದೂರಿದ್ದಾರೆ.

‘ಟ್ರ್ಯಾಕ್‌ನ ಮಧ್ಯಭಾಗದಲ್ಲಿರುವ ಹುಲ್ಲಿನ ಅಂಕಣವನ್ನು ಹೊಸದಾಗಿ ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ. ಥ್ರೋ (ಜಾವೆಲಿನ್‌, ಡಿಸ್ಕಸ್‌ ಮತ್ತು ಹ್ಯಾಮರ್‌) ಸ್ಪರ್ಧಿಗಳಿಗೆ ಕ್ರೀಡಾಂಗಣದ ಹುಲ್ಲಿನ ಅಂಕಣ ಬಳಸಲು ಅವಕಾಶ ನೀಡುತ್ತಿಲ್ಲ’ ಎಂದು ಕೋಚ್‌ ಎನ್‌.ಅರ್.ರಮೇಶ್‌ ಆರೋಪಿಸಿದ್ದಾರೆ.

‘ಟ್ರ್ಯಾಕ್‌ನ ಸುತ್ತಲೂ 20 ರಿಂದ 30 ಲೋಡ್‌ಗಳಷ್ಟು ಮರಳು ರಾಶಿ ಹಾಕಿದ್ದಾರೆ. ಇದರಿಂದ ಮಳೆ ನೀರು ಸರಿಯಾಗಿ ಹರಿದುಹೋಗದೆ ಟ್ರ್ಯಾಕ್‌ ಮೇಲೆ ನಿಂತಿದೆ. ಇತ್ತೀಚೆಗಷ್ಟೇ ₹ 3.5 ಕೋಟಿ ಖರ್ಚು ಮಾಡಿ ಹೊಸ ಟ್ರ್ಯಾಕ್‌ ಹಾಸಲಾಗಿತ್ತು. ಅದಕ್ಕೆ ಹಾನಿಯಾಗುವ ಸಾಧ್ಯತೆಯಿದೆ’ ಎಂದು ದೂರಿದರು.

ADVERTISEMENT

ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಫುಟ್‌ಬಾಲ್‌ ಪಂದ್ಯಗಳನ್ನು ಆಯೋಜಿಸಲು ಹುಲ್ಲಿನ ಅಂಕಣ ಅಣಿಗೊಳಿಸಲಾಗುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್‌ ಸೂಪರ್‌ಲೀಗ್‌ನ ತವರು ಪಂದ್ಯಗಳನ್ನು ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತದೆ. ಆದರೆ ಕೋವಿಡ್‌ ಕಾರಣ ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಯಾವುದೇ ಪಂದ್ಯ ನಡೆದಿಲ್ಲ.

‘ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ ಹೊರತುಪಡಿಸಿ, ಬೇರೆ ಕ್ರೀಡೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕ್ರೀಡಾ ಸಚಿವರು ಭರವಸೆ ನೀಡಿದ್ದರು. ಅಥ್ಲೆಟಿಕ್‌ ಕೂಟಗಳ ಆಯೋಜನೆ ಮತ್ತು ಅಥ್ಲೀಟ್‌ಗಳ ಅಭ್ಯಾಸಕ್ಕೆ ಯಾವುದೇ ಅಡ್ಡಿಉಂಟಾಗ ಬಾರದು’ ಎಂದು ಆಗ್ರಹಿಸಿದ್ದಾರೆ.

ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಿರುವ ಡಿವೈಇಎಸ್‌ ಜಂಟಿ ನಿರ್ದೇಶಕ ಎಂ.ಎಸ್‌.ರಮೇಶ್‌, ‘ಫುಟ್‌ಬಾಲ್‌ ಪಂದ್ಯಕ್ಕಾಗಿ ಹುಲ್ಲಿನ ಅಂಕಣ ಸಜ್ಜುಗೊಳಿಸುವ ಕೆಲಸ ನಡೆಯುತ್ತಿಲ್ಲ. ಈಗ ಕೈಗೊಂಡಿರುವುದು ನಿಯಮಿತ ನಿರ್ವಹಣಾ ಕೆಲಸ ಮಾತ್ರ. ಈ ಕಾಮಗಾರಿ ಇನ್ನೂ 15 ದಿನ ಮುಂದುವರಿಯಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.