ADVERTISEMENT

Paris Olympics: ಪದಕದ ಬರ ನೀಗಿಸುವ ನಿರೀಕ್ಷೆಯಲ್ಲಿ ಶೂಟಿಂಗ್ ಪಡೆ

ಪ್ಯಾರಿಸ್‌ ಕ್ರೀಡೆಗಳಿಗೆ 21 ಮಂದಿಯ ತಂಡ

​ಪ್ರಜಾವಾಣಿ ವಾರ್ತೆ
ಪಿಟಿಐ
Published 26 ಜುಲೈ 2024, 19:30 IST
Last Updated 26 ಜುಲೈ 2024, 19:30 IST
<div class="paragraphs"><p>ಮನು ಬಾಕರ್‌ </p></div>

ಮನು ಬಾಕರ್‌

   

–ಪಿಟಿಐ ಚಿತ್ರ

ಚಾಟೆವುರಾಕ್ಸ್‌ ಫ್ರಾನ್ಸ್‌: ಇದುವರೆಗೆ ಭಾರತ ಗೆದ್ದಿರುವ 35 ಒಲಿಂಪಿಕ್ಸ್‌ ಪದಕಗಳಲ್ಲಿ ಶೂಟಿಂಗ್‌ನಲ್ಲಿ ಗೆದ್ದ ನಾಲ್ಕು ಪದಕಗಳು ಸೇರಿವೆ. ಆದರೆ ಹಿಂದಿನ ಎರಡು ಒಲಿಂಪಿಕ್‌ ಕ್ರೀಡೆಗಳ ಶೂಟಿಂಗ್‌ನಲ್ಲಿ ತಂಡಕ್ಕೆ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಈ ಅಂಶ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ದಾಖಲೆಯ 21 ಮಂದಿಯ ತಂಡದ ಮೇಲಿನ ಒತ್ತಡ ಸ್ವಲ್ಪ ಹೆಚ್ಚಿಸಿದೆ.

ADVERTISEMENT

ಪ್ಯಾರಿಸ್‌ನಿಂದ ಸ್ವಲ್ಪ ದೂರದ ಶಾತುಹು ಪಟ್ಟಣದಲ್ಲಿ ಶೂಟಿಂಗ್‌ ಸ್ಪರ್ಧೆಗಳು ಶನಿವಾರ  ಆರಂಭವಾಗಲಿವೆ. ಶೂಟಿಂಗ್ ಫೆಡರೇಷನ್‌ ಈ ಬಾರಿ ಆಯ್ಕೆ ಟ್ರಯಲ್ಸ್‌ ನಡೆಸಿದ್ದು, ಶೂಟರ್‌ಗಳ ಹಿಂದಿನ ದಾಖಲೆಗಿಂತ ಹಾಲಿ ಫಾರ್ಮ್‌ಗೆ ಹೆಚ್ಚಿನ ಒತ್ತು ನೀಡಿದೆ. ಹೀಗಾಗಿ ವಿವಿಧ ಕಡೆ ಕೋಟಾ ಪಡೆದವರೂ ಟ್ರಯಲ್ಸ್‌ನಲ್ಲಿ ಪೂರ್ಣ ಸಾಮರ್ಥ್ಯ ತೋರಬೇಕಾಯಿತು.

‌ಮನು ಭಾಕರ್‌, ಐಶ್ವರಿ ಪ್ರಸಾದ್ ತೊಮಾರ್, ಅಂಜುಮ್ ಮೌದ್ಗಿಲ್‌ ಮತ್ತು ಇಲವೇನಿಲ್‌ ವಾಳರಿವನ್ ಬಿಟ್ಟರೆ ಉಳಿದ 17 ಮಂದಿಗೆ ಇದು ಮೊದಲ ಒಲಿಂಪಿಕ್ಸ್‌. ಭಾರತ ಶೂಟಿಂಗ್‌ನ ಎಲ್ಲ 15 ವಿಭಾಗಗಳಲ್ಲಿ ಕಣಕ್ಕಿಳಿಯಲಿದೆ.

ಸರಬ್ಜೋತ್‌ ಸಿಂಗ್‌, ಅರ್ಜುನ್‌ ಚೀಮಾ ಅವರು ಪುರುಷರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಶನಿವಾರ ಭಾರತದ ಸವಾಲು ಮುನ್ನಡೆಸುತ್ತಿದ್ದಾರೆ.

ರಿದಮ್‌ ಸಾಂಗ್ವಾನ್‌, ಮನು ಭಾಕರ್‌ ಅವರು ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.

ವಿಶ್ವಕಪ್ ಸೇರಿದಂತೆ ವಿವಿಧೆಡೆ ಪದಕ ಗೆದ್ದಿರುವ 22 ವರ್ಷದ ಮನು ಭಾಕರ್ ಅವರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 10 ಮೀ. ಏರ್‌ಪಿಸ್ತೂಲ್‌ ವಿಭಾಗದಲ್ಲಿ ಸ್ಪರ್ಧಿಸುವ ವೇಳೆ ಪಿಸ್ತೂಲ್‌ ಕೈಕೊಟ್ಟಿತು. ಅವರು ಮೂರು ವಿಭಾಗಗಳಲ್ಲಿ (10 ಮೀ. ಏರ್‌ಪಿಸ್ತೂಲ್‌, 25 ಮೀ. ಪಿಸ್ತೂಲ್‌, 10 ಮೀ. ಪಿಸ್ತೂಲ್‌ ಮಿಶ್ರ ತಂಡ) ಕಣಕ್ಕಿಳಿಯಲಿದ್ದಾರೆ.

ಭಾರತಕ್ಕೆ ಚೀನಾದಿಂದ ಪ್ರಮುಖ ಸವಾಲು ಎದುರಾಗಲಿದೆ. ಚೀನಾ ಸಹ 21 ಮಂದಿಯನ್ನು ಕಣಕ್ಕಿಳಿಸಿದೆ.

ಏಷ್ಯನ್‌ ಗೇಮ್ಸ್‌ ಸ್ವರ್ಣ ವಿಜೇತೆ ಸಿಫ್ಟ್‌ ಕೌರ್‌ ಸಮ್ರಾ ಅವರ ಪ್ರದರ್ಶನದ ಮೇಲೂ ಕಣ್ಣಿಡಲಾಗಿದೆ. ತಂಡಕ್ಕೆ ಪುನರಾಗಮನ ಮಾಡಿರುವ ಮೌದ್ಗಿಲ್ ಅವರು ಸಮ್ರಾ ಜೊತೆ ಮಹಿಳೆಯರ 50 ಮೀ. ರೈಫಲ್ ತ್ರಿ ಪೊಸಿಷನ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

24 ವರ್ಷ ವಯಸ್ಸಿನ ರಿದಂ ಎರಡು ಸ್ಪರ್ಧೆಗಳಲ್ಲಿ (10 ಮೀ. ಏರ್‌ಪಿಸ್ತೂಲ್ ಮತ್ತು 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗ) ಕಣಕ್ಕಿಳಿಯುತ್ತಿದ್ದಾರೆ.

ಪುರುಷರ ವಿಭಾಗದಲ್ಲಿ ತೋಮಾರ್ ಮಾತ್ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ. ಅನೀಶ್ ಭಾನವಾಲಾ, ಸರಬ್ಜೋತ್ ಸಿಂಗ್, ಅರ್ಜುನ್ ಬಬುತಾ, ಅರ್ಜುನ್ ಸಿಂಗ್ ಚೀಮಾ ಮತ್ತು ವಿಜಯವೀರ್ ಸಿಧು ಅವರಿಗೆ ಇದು ಚೊಚ್ಚಲ ಒಲಿಂಪಿಕ್ಸ್‌.‌

ಸಿಫ್ತ್‌ ಕೌರ್‌ ಸಮ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.