ADVERTISEMENT

2023ರ ಸೆಪ್ಟೆಂಬರ್‌ 23ರಿಂದ ಏಷ್ಯನ್‌ ಗೇಮ್ಸ್: ಡಬ್ಲ್ಯುಎಫ್‌ಐ ಅಸಮಾಧಾನ

ಪಿಟಿಐ
Published 19 ಜುಲೈ 2022, 13:05 IST
Last Updated 19 ಜುಲೈ 2022, 13:05 IST
ಚೀನಾದ ಜೇಜಿಯಾಂಗ್‌ನಲ್ಲಿ ರಚಿಸಿದ್ದ ಏಷ್ಯನ್ ಗೇಮ್ಸ್ ಲೋಗೊ ಮುಂದೆ ಮಹಿಳೆಯೊಬ್ಬರು ನಡೆದುಕೊಂಡು ಹೋದರು– ಎಎಫ್‌ಪಿ ಚಿತ್ರ
ಚೀನಾದ ಜೇಜಿಯಾಂಗ್‌ನಲ್ಲಿ ರಚಿಸಿದ್ದ ಏಷ್ಯನ್ ಗೇಮ್ಸ್ ಲೋಗೊ ಮುಂದೆ ಮಹಿಳೆಯೊಬ್ಬರು ನಡೆದುಕೊಂಡು ಹೋದರು– ಎಎಫ್‌ಪಿ ಚಿತ್ರ   

ಕುವೈತ್‌/ಬೀಜಿಂಗ್‌: ಕೋವಿಡ್‌–19ರ ಕಾರಣದಿಂದ ಮುಂದೂಡಿಕೆಯಾಗಿದ್ದ ಏಷ್ಯನ್ ಗೇಮ್ಸ್‌ಅನ್ನು ಮುಂದಿನ ವರ್ಷದ ಸೆಪ್ಟೆಂಬರ್‌ 23ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್‌ಜೊನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಮಂಗಳವಾರ ಈ ವಿಷಯ ತಿಳಿಸಿದೆ.

19ನೇ ಆವೃತ್ತಿಯ ಕ್ರೀಡಾಕೂಟವನ್ನು ಈ ಮೊದಲು ಈ ವರ್ಷದ ಸೆಪ್ಟೆಂಬರ್‌ 10ರಿಂದ 25ರವರೆಗೆ ಆಯೋಜಿಸಲು ತೀರ್ಮಾನಿಸಲಾಗಿತ್ತು. ಆದರೆ ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮೇ 6ರಂದು ಮುಂದೂಡಲಾಗಿತ್ತು.

‘ನಮ್ಮ ಕಾರ್ಯಪಡೆಯು ಚೀನಾ ಒಲಿಂಪಿಕ್ ಸಮಿತಿ, ಹಾಂಗ್‌ಜೊ ಏಷ್ಯನ್ ಗೇಮ್ಸ್ ಆಯೋಜನಾ ಸಮಿತಿ (ಎಚ್‌ಎಜಿಒಸಿ) ಮತ್ತು ಇನ್ನುಳಿದ ಭಾಗೀದಾರರೊಡನೆ ಎರಡು ತಿಂಗಳ ಕಾಲ ಚರ್ಚೆ ನಡೆಸಿ ವೇಳಾಪಟ್ಟಿಯನ್ನು ನಿಗದಿ ಮಾಡಿದೆ‘ ಎಂದು ಒಸಿಎ ತಿಳಿಸಿದೆ.

ADVERTISEMENT

ಏಷ್ಯನ್ ಗೇಮ್ಸ್ ನಡೆಯುವ ಸಂದರ್ಭದಲ್ಲಿ ಯಾವುದೇ ಪ್ರಮುಖ ಕೂಟಗಳು ನಡೆಯುತ್ತಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಆದರೆ ಒಲಿಂಪಿಕ್ಸ್ ಅರ್ಹತಾ ಕೂಟವಾಗಿರುವ 2023ರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್‌ 16ರಿಂದ 24ರವರೆಗೆ ರಷ್ಯಾದ ಕ್ರಾಸ್ನೊಯಾಸ್ಕ್‌ನಲ್ಲಿ ನಡೆಯಲಿದೆ. ಹೀಗಾಗಿ ಕುಸ್ತಿಪಟುಗಳು ಕಡಿಮೆ ಅವಧಿಯಲ್ಲಿ ಮತ್ತೊಂದು ಪ್ರಮುಖ ಕೂಟಕ್ಕೆ ಸಜ್ಜುಗೊಳ್ಳುವುದು ಕಷ್ಟಕರ ಎನಿಸಿದೆ.

ಏಷ್ಯನ್ ಗೇಮ್ಸ್‌ನ ಮರುನಿಗದಿಯಿಂದ ಭಾರತದ ಕುಸ್ತಿಪಟುಗಳು ರಷ್ಯಾದಿಂದ ನೇರವಾಗಿ ಚೀನಾಗೆ ಪಯಣ ಬೆಳೆಸಬೇಕಾಗುತ್ತದೆ. ಅವರ ವಿಶ್ರಾಂತಿಗೆ ಸಾಕಷ್ಟು ಸಮಯ ಸಿಗುವುದಿಲ್ಲ. ಹೀಗಾಗಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಈ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿದೆ.

‘ವಿಶ್ವ ಚಾಂಪಿಯನ್‌ಷಿಪ್‌, ಒಲಿಂಪಿಕ್‌ ಅರ್ಹತಾ ಕೂಟವಾಗಿದೆ. ಹೀಗಾಗಿ ಈ ನಿರ್ಧಾರಕ್ಕೆ ವಿಶ್ವ ಕುಸ್ತಿ ಮಂಡಳಿ (ಯುಡಬ್ಲ್ಯುಡಬ್ಲ್ಯು) ಹೇಗೆ ಒಪ್ಪಿಕೊಂಡಿತು? ಈ ಕೂಟಗಳ ನಡುವೆ ಹೆಚ್ಚಿನ ಅಂತರ ಇರಬೇಕಿತ್ತು. ಯುಡಬ್ಲ್ಯುಡಬ್ಲ್ಯು ವಿಶ್ವ ಚಾಂಪಿಯನ್‌ಷಿಪ್‌ಅನ್ನು ಮರು ನಿಗದಿ ಮಾಡಬೇಕಾಗಬಹುದು‘ ಎಂದುಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.