ADVERTISEMENT

ಅರ್ಜುನ್–ಅರವಿಂದ ಪೋರ್ಚುಗಲ್ ಪ್ರವಾಸ ರದ್ದು

ಪಿಟಿಐ
Published 30 ಮೇ 2021, 14:20 IST
Last Updated 30 ಮೇ 2021, 14:20 IST
ಅರ್ಜುನ್ ಲಾಲ್ ಜತ್ ಮತ್ತು ಅರವಿಂದ ಸಿಂಗ್ –ಎಎಫ್‌ಪಿ ಚಿತ್ರ
ಅರ್ಜುನ್ ಲಾಲ್ ಜತ್ ಮತ್ತು ಅರವಿಂದ ಸಿಂಗ್ –ಎಎಫ್‌ಪಿ ಚಿತ್ರ   

ನವದೆಹಲಿ: ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ರೋಯಿಂಗ್ ಪಟುಗಳಾದ ಅರ್ಜುನ್ ಲಾಲ್ ಜತ್ ಮತ್ತು ಅರವಿಂದ ಸಿಂಗ್ ಐದು ವಾರಗಳ ಪೋರ್ಚುಗಲ್ ಪ್ರವಾಸವನ್ನು ರದ್ದುಮಾಡಿದ್ದಾರೆ. ಅಲ್ಲಿ ಅಭ್ಯಾಸ ಮಾಡಲು ಅವರು ನಿರ್ಧರಿಸಿದ್ದರು. ಆದರೆ ಎರಡು ವಾರ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕಾದ ಕಾರಣ ತೀರ್ಮಾನ ಬದಲಿಸಿದ್ದಾರೆ.

ಪೋರ್ಚುಗಲ್‌ನ ಪೊಸಿಞೊ ಹೈ ಪರ್ಫಾರ್ಮೆನ್ಸ್‌ ಕೇಂದ್ರದಲ್ಲಿ ಅಭ್ಯಾಸ ಮಾಡಲು ಭಾರತ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ (ಎಂಒಸಿ) ಕಳೆದ ವಾರ ಈ ಜೋಡಿಗೆ ₹ 21 ಲಕ್ಷ ಅನುದಾನ ಘೋಷಣೆ ಮಾಡಿತ್ತು.

‘ಒಲಿಂಪಿಕ್ಸ್‌ಗೆ ಇನ್ನು ಎರಡು ತಿಂಗಳು ಕೂಡ ಬಾಕಿ ಇಲ್ಲ. ಇಂಥ ಸಂದರ್ಭದಲ್ಲಿ ಅಮೂಲ್ಯವಾದ ಎರಡು ವಾರಗಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಪ್ರವಾಸ ರದ್ದುಗೊಳಿಸಬೇಕಾಗಿ ಬಂದದ್ದಕ್ಕೆ ಬೇಸರವಿದೆ. ಆದರೆ ಏನು ಮಾಡಲೂ ಸಾಧ್ಯವಾಗದ ಪರಿಸ್ಥಿತಿ ಈಗ ಎದುರಾಗಿದೆ‌’ ಎಂದು 25 ವರ್ಷದ ಅರ್ಜುನ್ ಲಾಲ್ ತಿಳಿಸಿದರು.

ADVERTISEMENT

ಈ ತಿಂಗಳ ಆರಂಭದಲ್ಲಿ ಟೋಕಿಯೊದಲ್ಲಿ ನಡೆದ ಏಷ್ಯಾ ಒಷಿನಿಯಾ ಅರ್ಹತಾ ರೆಗಾಟದ ಲೈಟ್‌ವೇಟ್‌ ಡಬಲ್ ಸ್ಕಲ್ಸ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸುವುದರೊಂದಿಗೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಇಬ್ಬರೂ ಸದ್ಯ ಪುಣೆಯ ಸೇನೆಯ ಕ್ರೀಡಾ ಸಂಸ್ಥೆಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

‘‍ಪೋರ್ಚುಗಲ್‌ನಲ್ಲಿ ವಿಶ್ವದ ಪ್ರಮುಖ ರೋಯಿಂಗ್ ಪಟುಗಳು ಅಭ್ಯಾಸ ಮಾಡುತ್ತಾರೆ. ಅಲ್ಲಿಗೆ ತೆರಳಿದ್ದರೆ ಅದರ ಪ್ರಯೋಜನ ಸಿಗುತ್ತಿತ್ತು. ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸ್ಪರ್ಧೆ ಅಥವಾ ಅಭ್ಯಾಸದ ಅನುಭವ ಇಲ್ಲದೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕಾಗಿದೆ’ ಎಂದು ಅರ್ಜುನ್ ಲಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.