ರಾಷ್ಟ್ರಮಟ್ಟದ ಹಾಕಿ ಪಂದ್ಯದಲ್ಲಿ ನಾಯಕಿಯಾಗಿ ಆಟವಾಡಿ ಪ್ರಶಸ್ತಿ ಗಳಿಸಿರುವುದು
ಸೋಮವಾರಪೇಟೆ: ಗ್ರಾಮೀಣ ಹಾಕಿ ಪ್ರತಿಭೆ, ಇಲ್ಲಿನ ಆಲೆಕಟ್ಟೆ ರಸ್ತೆಯ ನಿವಾಸಿ ಎಂ.ಎಂ.ತಾನಿಯ ರಾಜ್ಯಮಟ್ಟದ 14ರ ವಯೋಮಾನದೊಳಗಿನ ತಂಡದ ಚುಕ್ಕಾಣಿ ಹಿಡಿದು, ಪ್ರಶಸ್ತಿ ಗಳಿಸಿ ನಾಡಿಗೆ ಹೆಮ್ಮೆ ತಂದಿದ್ದಾಳೆ.
ಈಕೆ 8ನೇ ತರಗತಿಯಲ್ಲಿ ಅಭ್ಯಾಸ ಮಾಡುವ ವೇಳೆಯಲ್ಲೇ ರಾಜ್ಯ ಹಾಕಿ ತಂಡವನ್ನು ಮುನ್ನೆಡೆಸುವ ಅವಕಾಶ ಪಡೆದು ಯಶಸ್ವಿಯಾಗಿರುವುದು ವಿಶೇಷ.
ಪೊನ್ನಂಪೇಟೆಯ ಕ್ರೀಡಾಶಾಲೆಯಲ್ಲಿ ಅಭ್ಯಾಸ ನಡೆಸುತ್ತಿರುವ ತಾನಿಯಾ ಸತತವಾಗಿ ಅಭ್ಯಾಸ ಮಾಡುವ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾಳೆ.
ಈಕೆ ಓಎಲ್‌ವಿ ಶಾಲೆಯಲ್ಲಿ ಅಭ್ಯಾಸ ನಡೆಸುವ ವೇಳೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಾಲ್ಫಿನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಾಕಿ ಬೇಸಿಗೆ ಶಿಬಿರ ಆಯೋಜನೆಯಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಈಕೆ, ಅಲ್ಲಿಂದ ತನ್ನ ಗಮನವನ್ನು ಓದಿನೊಂದಿಗೆ ಹಾಕಿಯತ್ತಲೂ ಹರಿಸಿದರು. ನಂತರ, ಮಡಿಕೇರಿಯ ಡಿವೈಇಎಸ್ ಸ್ಪೋರ್ಟ್ಸ್ ಶಾಲೆಗೆ ಆಯ್ಕೆಯಾಗಿ 5ನೇ ತರಗತಿಯಿಂದ 7ನೇ ತರಗತಿಯವರೆಗೆ ಅಭ್ಯಾಸ ನಡೆಸಿದ್ದಳು. 8ನೇ ತರಗತಿಗೆ ಪೊನ್ನಂಪೇಟೆಯ ಸ್ಪೋರ್ಟ್ಸ್ ಶಾಲೆಗೆ ಆಯ್ಕೆಯಾಗುವ ಮೂಲಕ ತನ್ನಲ್ಲಿರುವ ಪ್ರತಿಭೆಗೆ ಒರೆಹಚ್ಚುವ ಮೂಲಕ ರಾಷ್ಟ್ರಮಟ್ಟದಲ್ಲಿ, ರಾಜ್ಯದ ತಂಡದ ನೇತೃತ್ವವನ್ನು ವಹಿಸಲು ಅವಕಾಶ ಪಡೆದಿರುವುದು, ಇವರಲ್ಲಿನ ಕ್ರೀಡಾ ಪ್ರತಿಭೆಗೆ ಸಾಕ್ಷಿಯಾಗಿದೆ.
ಬೆಂಗಳೂರಿನಲ್ಲಿ ನಡೆದಿದ್ದ ಮಿನಿ ಒಲಂಪಿಕ್ಸ್‌ನಲ್ಲಿ ರಾಜ್ಯದ ತಂಡವನ್ನು ಪ್ರತಿನಿಧಿಸಿದ್ದ ಇವರ ತಂಡ 3ನೇ ಸ್ಥಾನ ಗಳಿಸಿತ್ತು. ಇದರೊಂದಿಗೆ ಹಲವು ಡಿವಿಷನ್ ಹಾಗೂ ರಾಜ್ಯಮಟ್ಟದ ಹಲವು ಪಂದ್ಯಗಳಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಇವರಿಗಿದೆ.
ಹಾಕಿ ಮಾತ್ರವಲ್ಲದೆ, ಫುಟ್‌ಬಾಲ್‌ನಲ್ಲಿ ಡಿವಿಷನ್ ಮಟ್ಟದಲ್ಲಿ, ಟೇಬಲ್ ಟೆನ್ನಿಸ್‌ನಲ್ಲಿ ಜಿಲ್ಲಾ ಮಟ್ಟ ಹಾಗೂ ಅಥ್ಲೇಟಿಕ್ಸ್‌ನಲ್ಲಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ್ದಾಳೆ. ಕ್ರೀಡೆಗಾಗಿ ಬೆಳಿಗ್ಗೆ 6-30ರಿಂದ 8-30 ಮತ್ತು ಸಂಜೆ 4-30ರಿಂದ 6-30ರವರೆಗೆ ನಿರಂತರ ಅಭ್ಯಾಸ ನಡೆಸುತ್ತಿರುವ ಇವರು, ಶಿಕ್ಷಣದಲ್ಲಿಯೂ ಹಿಂದೆ ನೋಡದೆ, ಉತ್ತಮ ಅಂಕಗಳಿಸುತ್ತಿರುವುದು ಹೆಮ್ಮೆಯ ವಿಷಯ.
4ನೇ ತರಗತಿಯ ಅವಧಿಯಲ್ಲಿ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಶೋಕ್ ಮತ್ತು ಅಭಿ ಹಾಕಿಯಲ್ಲಿ ಆರಂಭಿಕ ಕೋಚ್ ಆಗಿದ್ದರೆ, ಈಗ ಪೊನ್ನಂಪೇಟೆಯ ಸ್ಪೋರ್ಟ್ಸ್ ಶಾಲೆಯ ಸುಬ್ಬಯ್ಯ ಮತ್ತು ಗಣಪತಿ ಅವರು ಕೋಚ್ ಆಗಿ ತರಬೇತಿ ನೀಡುತ್ತಿದ್ದಾರೆ.
ತಾನಿಯಾ ಮಾತನಾಡಿ, ‘ಕ್ರೀಡೆಯಲ್ಲಿ ಸಾಕಷ್ಟು ಸಾಧಕರಿದ್ದಾರೆ. ಅವರಂತೆ ನಾನೂ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದಲ್ಲಿ ನಮ್ಮ ದೇಶದ ಡ್ರೆಸ್ ಧರಿಸಿ ದೇಶವನ್ನು ಪ್ರತಿನಿಧಿಸುವ ಆಸೆ ಇದೆ. ಅದಕ್ಕಾಗಿ ನಿರಂತರ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಸಾಧನೆಗೆ ಪೋಷಕರು ಹಾಗೂ ಕೋಚ್ ಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ನಮ್ಮ ಕುಟುಂಬದಲ್ಲಿ ಯಾವುದೇ ಕ್ರೀಡಾಪಟುಗಳಿಲ್ಲ. ಆದರೆ, ನಮ್ಮ ಮಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಮುನ್ನೆಡೆಯುತ್ತಿದ್ದಾಳೆ. ಅದಕ್ಕಾಗಿ ನಾವು ಯಾವುದೇ ಸಹಕಾರ ನೀಡಲು ಸಿದ್ಧರಿದ್ದೇವೆ’ ಎಂದು ತಂದೆ ಅಸ್ಲಾಂ ಮತ್ತು ತಾಯಿ ಅಸ್ಮಾ ಭಾನು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.