ADVERTISEMENT

ಒಲಿಂಪಿಕ್ಸ್‌ ಸ್ಪರ್ಧೆಗಳಿಂದ ರಷ್ಯಾಗೆ 4 ವರ್ಷ ನಿಷೇಧ; ಉದ್ದೀಪನ ಮದ್ದು ಪ್ರಕರಣ

ರಾಯಿಟರ್ಸ್
Published 9 ಡಿಸೆಂಬರ್ 2019, 12:19 IST
Last Updated 9 ಡಿಸೆಂಬರ್ 2019, 12:19 IST
ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಎದುರು ಯುವತಿಯೊಬ್ಬಳು ರಷ್ಯಾ ಧ್ವಜ ಹಿಡಿದಿರುವುದು
ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಎದುರು ಯುವತಿಯೊಬ್ಬಳು ರಷ್ಯಾ ಧ್ವಜ ಹಿಡಿದಿರುವುದು   

ಮಾಸ್ಕೊ: ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ರಷ್ಯಾ ಒಲಿಂಪಿಕ್ಸ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಕ್ರೀಡಾ ಸ್ಪರ್ಧೆಗಳಿಂದ ನಾಲ್ಕು ವರ್ಷ ನಿಷೇಧಕ್ಕೆ ಒಳಗಾಗಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ಸೋಮವಾರ ಈ ಸಂಬಂಧ ನಿರ್ಧಾರ ಕೈಗೊಂಡಿದೆ.

ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿದ ದೂರುಗಳನ್ನುರಷ್ಯಾ ಎದುರಿಸಿತ್ತು. ಮೂಲ ದಾಖಲೆಗಳನ್ನು ಅಳಿಸಿ ಹಾಕಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದರ ಹಿನ್ನೆಲೆಯಲ್ಲಿ‘ವಾಡಾ’ದ ಕಾರ್ಯಕಾರಿ ಸಮಿತಿ ರಷ್ಯಾಗೆ ಒಲಿಂಪಿಕ್ಸ್‌ನಿಂದ ಹೊರಗುಳಿಸುವ ನಿರ್ಧಾರ ಕೈಗೊಂಡಿದೆ.

1980ರ ಮಾಸ್ಕೊ ಒಲಿಂಪಿಕ್ಸ್‌ ನೆನಪಿಸುವ ಕಲಾಕೃತಿ; ಪದಕ ಧರಿಸಿರುವ ಮಿಶಾ ಕರಡಿ

ರಷ್ಯಾ ಅಥ್ಲೆಟಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿದೆ ಎನ್ನುವುದಕ್ಕೆ 2015ರಲ್ಲಿ ವಾಡಾ ಸಿದ್ಧಪಡಿಸಿದ ವರದಿಯಲ್ಲಿ ಸಾಕ್ಷ್ಯ ದೊರಕಿತ್ತು.ಕ್ರೀಡಾ ಕ್ಷೇತ್ರದ ಪ್ರಬಲ ಶಕ್ತಿಯಾಗುವ ಯತ್ನದಲ್ಲಿದ್ದ ರಷ್ಯಾ ಈ ವರದಿಯ ನಂತರ ಡೋಪಿಂಗ್‌ ಹಗರಣದ ಹಬೆಯಲ್ಲಿ ಬೇಯುತ್ತಿದೆ.

ADVERTISEMENT

ನಿಷೇಧದಿಂದಾಗಿ ರಷ್ಯಾ ಯಾವುದೇ ಪ್ರಮುಖ ಕ್ರೀಡಾಕೂಟಗಳ ಆತಿಥ್ಯ ವಹಿಸುವಂತಿಲ್ಲ. ಸಚ್ಚಾರಿತ್ರ್ಯದ ಅಥ್ಲೀಟ್‌ಗಳು ಪಾಲ್ಗೊಳ್ಳಬಹುದಾದರೂ ರಾಷ್ಟ್ರೀಯ ಧ್ವಜದಡಿ ಭಾಗವಹಿಸುವಂತಿಲ್ಲ.

ಹಿಂದಿನ ಎರಡು ಒಲಿಂಪಿಕ್ಸ್‌ಗಳಿಗೆ ರಷ್ಯಾ ತನ್ನ ಪ್ರಮುಖ ಅಥ್ಲೀಟ್‌ಗಳಿಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಪ್ಯಾಂಗ್‌ಚಾಂಗ್‌ ಚಳಿಗಾಲದ ಕ್ರೀಡೆಗಳಲ್ಲಿ ರಷ್ಯಾ ಸ್ವಂತ ಧ್ವಜದಡಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. 2014ರ ಸೋಚಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಹಗರಣಗಳನ್ನು ಸರ್ಕಾರವೇ ಮುಚ್ಚಿಟ್ಟಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.