ADVERTISEMENT

ಉದ್ದೀಪನ ಮದ್ದು ಸೇವನೆ: ರಷ್ಯಾ ಮೇಲೆ ನಿಷೇಧ ಸಾಧ್ಯತೆ

ರಾಯಿಟರ್ಸ್
Published 7 ಡಿಸೆಂಬರ್ 2019, 19:50 IST
Last Updated 7 ಡಿಸೆಂಬರ್ 2019, 19:50 IST

ಮಾಸ್ಕೊ: ಉದ್ದೀಪನ ಮದ್ದು ಸೇವನೆ ನಿಯಮ ಕಡೆಗಣಿಸಿದಕ್ಕಾಗಿ ರಷ್ಯಾ ಈಗ ನಾಲ್ಕು ವರ್ಷಗಳ ಒಲಿಂಪಿಕ್‌ ನಿಷೇಧಕ್ಕೆ ಒಳಗಾಗುವ ಭೀತಿ ಎದುರಿಸುತ್ತಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ (ವಾಡಾ) ಸೋಮವಾರ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದೆ.‌

‘ಈ ಶಿಕ್ಷೆ ನ್ಯಾಯಸಮ್ಮತವಲ್ಲದ ಮತ್ತು ದೇಶದ ಕ್ರೀಡಾಕ್ಷೇತ್ರವನ್ನು ನಾಶಪಡಿಸುವ ಪಾಶ್ಚಾತ್ಯರ ಪ್ರಯತ್ನದ ಭಾಗವಾಗಿದೆ’ ಎಂದು ಸ್ಥಳೀಯ ಅಧಿಕಾರಿಗಳು ದೂರಿದ್ದಾರೆ.

ರಷ್ಯಾ ಅಥ್ಲೆಟಿಕ್ಸ್‌ನಲ್ಲಿ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿದೆ ಎನ್ನುವುದಕ್ಕೆ 2015ರಲ್ಲಿ ವಾಡಾ ಸಿದ್ಧಪಡಿಸಿದ ವರದಿಯಲ್ಲಿ ಸಾಕ್ಷ್ಯ ದೊರಕಿತ್ತು.ಕ್ರೀಡಾ ಕ್ಷೇತ್ರದ ಪ್ರಬಲ ಶಕ್ತಿಯಾಗುವ ಯತ್ನದಲ್ಲಿದ್ದ ರಷ್ಯಾ ಈ ವರದಿಯ ನಂತರ ಡೋಪಿಂಗ್‌ ಹಗರಣದ ಹಬೆಯಲ್ಲಿ
ಬೇಯುತ್ತಿದೆ.

ADVERTISEMENT

ಹಿಂದಿನ ಎರಡು ಒಲಿಂಪಿಕ್ಸ್‌ಗಳಿಗೆ ರಷ್ಯಾ ತನ್ನ ಪ್ರಮುಖ ಅಥ್ಲೀಟುಗಳಿಗೆ ಅವಕಾಶ ನೀಡಿರಲಿಲ್ಲ. ಕಳೆದ ವರ್ಷ ಪ್ಯಾಂಗ್‌ಚಾಂಗ್‌ ಚಳಿಗಾಲದ ಕ್ರೀಡೆಗಳಲ್ಲಿ ರಷ್ಯಾ ಸ್ವಂತ ಧ್ವಜದಡಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿತ್ತು. 2014ರ ಸೋಚಿ ಕ್ರೀಡೆಗಳಲ್ಲಿ ಉದ್ದೀಪನ ಮದ್ದು ಸೇವನೆ ಹಗರಣಗಳನ್ನು ಸರ್ಕಾರವೇ ಮುಚ್ಚಿಟ್ಟಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿತ್ತು.

ಮದ್ದು ಸೇವನೆಗೆ ಸಂಬಂಧಿಸಿದ ಪ್ರಯೋಗಾಲಯದ ವರದಿಗಳನ್ನು ತಿರುಚಿದ ದೂರುಗಳನ್ನೂ ರಷ್ಯಾ ಎದುರಿಸುತ್ತಿದೆ.

‘ವಾಡಾ’ದ ಕಾರ್ಯಕಾರಿ ಸಮಿತಿ ಸೋಮವಾರ ಲಾಸೇನ್‌ನಲ್ಲಿ (ಸ್ವಿಜರ್ಲೆಂಡ್‌) ಸೇರಲಿದ್ದು, ಅಂದು ರಷ್ಯಾದ ಒಲಿಂಪಿಕ್‌ ಭವಿಷ್ಯ ತೀರ್ಮಾನವಾಗಲಿದೆ.

ನಿಷೇಧ ಹೇರಿದರೆ ರಷ್ಯಾ ಯಾವುದೇ ಪ್ರಮುಖ ಕ್ರೀಡಾಕೂಟಗಳ ಆತಿಥ್ಯ ವಹಿಸುವಂತಿಲ್ಲ. ಸಚ್ಚಾರಿತ್ರ್ಯದ ಅಥ್ಲೀಟುಗಳು ಪಾಲ್ಗೊಳ್ಳಬಹುದಾದರೂ ರಾಷ್ಟ್ರೀಯ ಧ್ವಜದಡಿ ಭಾಗವಹಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.