ADVERTISEMENT

ಉಕ್ರೇನ್‌ ಮೇಲಿನ ದಾಳಿ: ರಷ್ಯಾ ಅಥ್ಲೀಟ್‌ಗಳ ಮೇಲೆ ಮುಂದುವರಿದ ನಿರ್ಬಂಧ

ಉಕ್ರೇನ್‌ ಮೇಲಿನ ದಾಳಿಗೆ ಬೆಲೆ ತೆರುತ್ತಿರುವ ಕ್ರೀಡಾಪಟುಗಳು

ಪಿಟಿಐ
Published 1 ಮಾರ್ಚ್ 2022, 16:12 IST
Last Updated 1 ಮಾರ್ಚ್ 2022, 16:12 IST
ವ್ಲಾಡಿಮಿರ್ ಪುಟಿನ್‌– ಪಿಟಿಐ ಚಿತ್ರ
ವ್ಲಾಡಿಮಿರ್ ಪುಟಿನ್‌– ಪಿಟಿಐ ಚಿತ್ರ   

ಪ್ಯಾರಿಸ್‌:ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ಕ್ರೀಡಾಕ್ಷೇತ್ರದಲ್ಲಿ ರಷ್ಯಾ ಭಾರೀ ಬೆಲೆ ತೆರುತ್ತಿರುವುದು ಹೆಚ್ಚಿದೆ. ಹಲವು ಕ್ರೀಡೆಗಳಿಂದ ಆ ದೇಶದ ಅಥ್ಲೀಟ್‌ಗಳು ಅಮಾನತು ಅಥವಾ ನಿರ್ಬಂಧ ಶಿಕ್ಷೆ ಎದುರಿಸುವಂತಾಗಿದೆ.

ಐಸ್‌ ಸ್ಕೇಟಿಂಗ್‌ನಲ್ಲಿ ರಷ್ಯಾ ಕ್ರೀಡಾಪಟುಗಳು ಸಾಂಪ್ರದಾಯಿಕ ‘ಶಕ್ತಿ ಕೇಂದ್ರ‘ ಆಗಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನ ಸೇರದಂತೆ ಆರು ಪದಕಗಳು ಅವರಿಗೆ ಒಲಿದಿದ್ದವು. ಸದ್ಯ ಎಲ್ಲ ಮಾದರಿಯ ಸ್ಕೇಟಿಂಗ್‌ ಸ್ಪರ್ಧೆಗಳಿಂದ ನಿರ್ಬಂಧ ಹೇರಲಾಗಿದೆ. ಇದರೊಂದಿಗೆ ಮಾರ್ಚ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆ ದೇಶದ ಅಥ್ಲೀಟ್‌ಗಳು ಆಡುವಂತಿಲ್ಲ.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇತೃತ್ವದಲ್ಲಿ ಜಾಗತಿಕವಾಗಿ ಮತ್ತು ಆಂತರಿಕವಾಗಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಕ್ರೀಡೆಯನ್ನು ಪ್ರಬಲ ಶಕ್ತಿಯಾಗಿ ಬಳಸಿಕೊಂಡಿದ್ದ ದೇಶಕ್ಕೆ ಇದು ಮತ್ತೊಂದು ಗಮನಾರ್ಹ ಹಿನ್ನಡೆಯಾಗಿ ಪರಿಣಮಿಸಿದೆ.

ADVERTISEMENT

ಪುಟಿನ್ ಅಧ್ಯಕ್ಷತೆಯಲ್ಲಿ ಸೋಚಿಯಲ್ಲಿ 2014ರಲ್ಲಿ ಚಳಿಗಾಲದ ಒಲಿಂಪಿಕ್ಸ್ಅನ್ನು ಆಯೋಜಿಸಲಾಗಿತ್ತು. ಆದರೂ ಆ ಕ್ರೀಡಾಕೂಟಕ್ಕೆ ಸರ್ಕಾರ ಪ್ರಾಯೋಜಿತ ಡೋಪಿಂಗ್ ಹಗರಣ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. 2018 ಫುಟ್‌ಬಾಲ್‌ ವಿಶ್ವಕಪ್ ಕೂಡ ರಷ್ಯಾದಲ್ಲಿ ನಡೆದಿತ್ತು.

ಪುಟಿನ್‌ರ ‘ಬ್ಲ್ಯಾಕ್‌ ಬೆಲ್ಟ್‌’ ಕಸಿದ ವಿಶ್ವಟೇಕ್ವಾಂಡೊ:ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪ್ರದಾನ ಮಾಡಲಾಗಿದ್ದ ಗೌರವ ಟೇಕ್ವಾಂಡೊ‘ಬ್ಲ್ಯಾಕ್‌ ಬೆಲ್ಟ್‌’ ಅನ್ನು ವಿಶ್ವಟೇಕ್ವಾಂಡೊಸೋಮವಾರ ಹಿಂಪಡೆದುಕೊಂಡಿದೆ. ಉಕ್ರೇನ್ ಮೇಲಿನ ದಾಳಿ ಖಂಡಿಸಿ ಈ ನಿರ್ಣಯ ತೆಗೆದುಕೊಂಡಿದೆ.

‘ಮಾಸ್ಕೋದ ಕ್ರಮಗಳು ಕ್ರೀಡೆಯ ದೃಷ್ಟಿಕೋನಕ್ಕೆ ವಿರುದ್ಧವಾಗಿವೆ. ದಿಗ್ವಿಜಯಕ್ಕಿಂತಲೂ ಶಾಂತಿ ಹೆಚ್ಚು ಅಮೂಲ್ಯವಾದದ್ದು’ ಎಂದು ಅದು ಅಭಿಪ್ರಾಯಪಟ್ಟಿದೆ.

ಫಿಫಾದಿಂದ ಹೊರಕ್ಕೆ: ಸೋಮವಾರ ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ ಫಿಫಾ 2022ರ ವಿಶ್ವಕಪ್‌ನಿಂದ ರಷ್ಯಾವನ್ನು ಹೊರಗಿಟ್ಟಿತ್ತು. ಯೂರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟವೂ (ಯುಇಎಫ್‌ಎ) ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳಿಂದ ರಷ್ಯಾದ ರಾಷ್ಟ್ರೀಯ ತಂಡಗಳು ಮತ್ತು ಕ್ಲಬ್‌ಗಳನ್ನು ಹೊರಹಾಕಿದೆ.

ವಾಲಿಬಾಲ್ ವಿಶ್ವ ಚಾಂಪಿಯನ್‌ಷಿಪ್‌ ಹಕ್ಕು ಇಲ್ಲ: ಈ ವರ್ಷದ ಆಗಸ್ಟ್ ಹಾಗೂ ಸೆಪ‍್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಪುರುಷರ ವಾಲಿಬಾಲ್ ವಿಶ್ವ ಚಾಂಪಿಯನ್‌ಷಿಪ್ ಆತಿಥ್ಯದ ಹಕ್ಕನ್ನು ರಷ್ಯಾ ಕಳೆದುಕೊಂಡಿದೆ.

‘ಉಕ್ರೇನ್‌ ಮೇಲಿನ ಯುದ್ಧದಿಂದಾಗಿ ರಷ್ಯಾದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ಮತ್ತು ಆಯೋಜಿಸುವುದು ಅಸಾಧ್ಯವೆಂದು ಅಂತರರಾಷ್ಟ್ರೀಯ ವಾಲಿಬಾಲ್‌ ಫೆಡರೇಷನ್‌ನ (ಎಫ್‌ಐವಿಬಿ) ಆಡಳಿತ ಮಂಡಳಿಯು ತೀರ್ಮಾನಕ್ಕೆ ಬಂದಿದ‘ ಎಂದು ಫೆಡರೇಷನ್‌ ಹೇಳಿಕೆಯಲ್ಲಿ ತಿಳಿಸಿದೆ.

ಬ್ಯಾಡ್ಮಿಂಟನ್‌ ಫೆಡರೇಷನ್‌: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮಂಗಳವಾರ ರಷ್ಯಾ ಹಾಗೂ ಬೆಲಾರೂಸ್‌ ಅಥ್ಲೀಟ್‌ಗಳ ಮೇಲೆ ನಿಷೇಧ ಹೇರಿದೆ. ಇದಕ್ಕೂ ಮೊದಲು ಈ ಎರಡೂ ದೇಶಗಳಲ್ಲಿ ನಿಗದಿಯಾಗಿದ್ದ, ಫೆಡರೇಷನ್‌ ಅನುಮೋದಿತ ಟೂರ್ನಿಗಳನ್ನು ರದ್ದುಗೊಳಿಸಿದೆ.

ತಟಸ್ಥ ತಂಡ ಅಥವಾ ಅಥ್ಲೀಟ್‌ಗಳಾಗಿ ಭಾಗವಹಿಸಲು ಫಿನಾ ಅನುಮತಿ: ರಷ್ಯಾ ಅಥವಾ ಬೆಲಾರೂಸ್‌ನ ವ್ಯಕ್ತಿಗಳು ಅಥವಾ ತಂಡಗಳಾಗಿರಲಿ, ತಟಸ್ಥವಾಗಿ ಮಾತ್ರ ಭಾಗವಹಿಸಬಹುದು ಎಂದು ಎಂದು ವಿಶ್ವ ಈಜು ಸಂಸ್ಥೆ (ಫಿನಾ) ಹೇಳಿದೆ.

ಟೆನಿಸ್‌ ಪಟುಗಳ ಆತಂಕ: ವಿಶ್ವ ಟೆನಿಸ್‌ ಕ್ರಮಾಂಕದಲ್ಲಿ ನೂತನವಾಗಿ ಅಗ್ರಸ್ಥಾನ ಅಲಂಕರಿಸಿರುವ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಮತ್ತಿತರ ರಷ್ಯಾದ ತಾರೆಗಳು ಎಟಿಪಿ ಹಾಗೂ ಡಬ್ಲ್ಯುಟಿಎ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ಆತಂಕದಿಂದ ನಿರೀಕ್ಷಿಸುತ್ತಿದ್ದಾರೆ.

ಡೇವಿಸ್‌ಕಪ್ ಟೂರ್ನಿಯಲ್ಲಿ ಹಿಡಿತ ಹೊಂದಿರುವ ರಷ್ಯಾ, ಈ ವಾರಾಂತ್ಯದ ಪ್ಲೇ-ಆಫ್‌ಗಳಲ್ಲಿ ಭಾಗವಹಿಸದಿದ್ದರೂ ಟೂರ್ನಿಯನ್ನು ನಡೆಸುವ ಕುರಿತು ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್‌) ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಸಭೆಯ ಬಳಿಕ ಐಬಿಎ ನಿರ್ಧಾರ: ರಷ್ಯಾ ಹಾಗೂ ಬೆಲಾರೂಸ್‌ನ ಅಥ್ಲೀಟ್‌ಗಳನ್ನು ನಿಷೇಧಿಸುವ ಕುರಿತು ಈ ವಾರದಲ್ಲಿ ಸಭೆ ಕುರಿತು ನಿರ್ಧಾರ ತೆಗೆದುಕೊಳ್ಳುವುದಾಗಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಮಂಗಳವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.