ಮಂಗಳೂರು: ಕಳೆದ ವರ್ಷ ಮದುರೆಯಲ್ಲಿ ನಡೆದ ಅಖಿಲ ಭಾರತ ಮುಕ್ತ ಕಬಡ್ಡಿ ಟೂರ್ನಿಯ ಕ್ವಾರ್ಟರ್ ಫೈನಲ್. ಸರ್ವಿಸಸ್ ಎದುರಿನ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡ ತಂಡದಲ್ಲಿ ಅತಿಥಿ ಆಟಗಾರನಾಗಿದ್ದ ಉಳ್ಳಾಲದ ಸಾಯಿ ಪ್ರಸಾದ್ ರೈಡಿಂಗ್ ವೇಳೆ ಗಂಭೀರ ಗಾಯಗೊಂಡಿದ್ದರು. ಅಂದು ಶಿನ್ ಎಲುಬು (ಟಿಬಿಯಾ) ಮುರಿದಿದ್ದ ಅವರು ಈಗ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಿಂಚುತ್ತಿದ್ದಾರೆ.
ಮಾಸನಮುತ್ತು ಬದಲಿಗೆ ತಮಿಳ್ ತಲೈವಾಸ್ ತಂಡದಲ್ಲಿ ಆಡುತ್ತಿರುವ ಸಾಯಿ ಪ್ರಸಾದ್ ಅವರು ಉಳ್ಳಾಲ ಕಾಪಿಕಾಡ್‌ನ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಆಟಗಾರ. ಬಲಭಾಗದ ರೈಡಿಂಗ್ ಪರಿಣಿತರಾಗಿರುವ ಅವರು ಈ ಬಾರಿ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆಯಲ್ಲಿದ್ದರು. ನಂತರ ತಲೈವಾಸ್‌ನ ಶಿಬಿರದಲ್ಲಿದ್ದು ಡಿಸೆಂಬರ್ 11ರಿಂದ 15ರ ವರೆಗೆ 3 ಪಂದ್ಯಗಳಲ್ಲಿ ಒಟ್ಟು 8 ಪಾಯಿಂಟ್ ಕಲೆ ಹಾಕಿದ್ದಾರೆ.
‘ಕಾಲು ಮುರಿದಾಗ ಸಾಯಿಯ ಕಬಡ್ಡಿ ಜೀವನ ಮುಗಿಯಿತು ಎಂದುಕೊಂಡಿದ್ದೆವು. ಆದರೆ ಕೆ.ಎಸ್.ಹೆಗಡೆ ಆಸ್ಪತ್ರೆಯ ಸರ್ಜನ್ ಡಾ.ವಿಕ್ರಂ ಶೆಟ್ಟಿ ಧೈರ್ಯ ತುಂಬಿದರು. ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ಮೂರೇ ತಿಂಗಳಲ್ಲಿ ಎದ್ದು ನಡೆಯುವಂತೆ ಮಾಡಿದರು. ಇದರಿಂದಾಗಿ ಈಗ ಪಿಕೆಎಲ್‌ನಲ್ಲಿ ಆಡುವಂತಾಯಿತು’ ಎಂದು ಸಾಯಿ ಪ್ರಸಾದ್ ತಂದೆ ಹಾಗೂ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಸ್ಥಾಪಕ ಗೋಪಿನಾಥ್ ಕುಮಾರ್ ಹೇಳಿದರು. ಸಾಯಿ ತಾಯಿ ವನಜಾಕ್ಷಿ.
ಸೈಡ್ ಕಿಕ್, ಬ್ಯಾಕ್ ಕಿಕ್ ಮತ್ತು ರನ್ನಿಂಗ್ ಹ್ಯಾಂಡ್ ಟಚ್ ಕಲೆ ಕರಗತ ಮಾಡಿಕೊಂಡಿರುವ ಸಾಯಿ ಪಿಕೆಎಲ್ ಪಾದಾರ್ಪಣೆ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ ವಿರುದ್ಧ ಪರ್ವೇಜ್ ಬೈನ್ಸ್ವಾಲ್, ರಿಂಕು, ಲೋಕೇಶ್ ಘೋಸ್ಲಿಯಾ, ಸುನಿಲ್ ಕುಮಾರ್ ಮುಂತಾದ ಪ್ರಮುಖರನ್ನು ಎದುರಿಸಿ 5 ಪಾಯಿಂಟ್ ಗಳಿಸಿದ್ದರು. 2ನೇ ಪಂದ್ಯದಲ್ಲಿ 3 ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ಎದುರು ಗಮನ ಸೆಳೆದಿದ್ದರು. ಭಾನುವಾರ ನಡೆದ 3ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು 10 ರೈಡ್ ಮಾಡಿದ್ದರು.
ನಾಕೌಟ್ ಹಂತ ತಲುಪಲು ವಿಫಲವಾಗಿರುವ ತಲೈವಾಸ್‌ಗೆ ಲೀಗ್‌ನಲ್ಲಿ ಇನ್ನು 3 ಪಂದ್ಯಗಳು ಇವೆ. ‘ಆರಂಭದಲ್ಲಿ ಮ್ಯಾಟ್‌ಗೆ ಇಳಿಯುವಾಗ ಆತಂಕವಿತ್ತು. ನಂತರ ಚೇತರಿಸಿಕೊಂಡೆ. ಉಳಿದಿರುವ ಪಂದ್ಯಗಳಲ್ಲಿ ಚೆನ್ನಾಗಿ ಆಡಿ ಮುಂದಿನ ಬಾರಿಗೆ ಸಿದ್ಧತೆ ಮಾಡಿಕೊಳ್ಳುವುದು ಈಗಿನ ಗುರಿ’ ಎಂದು ‘ಪ್ರಜಾವಾಣಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಾಯಿ ಹೇಳಿದರು.
ಸಾಯಿ 9ನೇ ತರಗತಿಯಲ್ಲಿದ್ದಾಗಲೇ ಕಬಡ್ಡಿ ಪಯಣ ಅರಂಭಗೊಂಡಿತ್ತು. ಉಮಾಮಹೇಶ್ವರಿ ಅಕಾಡೆಮಿಯಲ್ಲಿ ಕರುಣಾಕರ ಶೆಟ್ಟಿ ಮತ್ತು ಅರುಣ್ ಕುಮಾರ್ ಬಳಿ ತರಬೇತಿ ಪಡೆದಿರುವ ಅವರು ತೊಕ್ಕೊಟ್ಟು ಸೇಂಟ್ ಸೆಬಾಸ್ಟಿಯನ್ ಶಾಲೆ, ತಲಪಾಡಿ ಶಾರದಾ ನಿಕೇತನ, ಸೋಮೇಶ್ವರದ ಪರಿಜ್ಞಾನ ಕಾಲೇಜು, ಮಂಗಳೂರಿನ ಪ್ರೇರಣಾ ಕಾಲೇಜಿನ ಹಳೆ ವಿದ್ಯಾರ್ಥಿ. ಈಗ ಮೂಡುಬಿದಿರೆ ಆಳ್ವಾಸ್‌ನಲ್ಲಿ ಎಂ.ಕಾಂ ಕಲಿಯುತ್ತಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆ ತಂಡದಲ್ಲಿದ್ದ ಅವರು ಜೂನಿಯರ್ ರಾಷ್ಟ್ರೀಯ ಟೂರ್ನಿಯಲ್ಲಿ ರಾಜ್ಯ ತಂಡದ ಉಪನಾಯಕ ಆಗಿದ್ದರು. ಅಖಿಲ ಭಾರತ ಮತ್ತು ದಕ್ಷಿಣ ಭಾರತ ಅಂತರ ವಿವಿ ಟೂರ್ನಿಗಳಲ್ಲಿ 3 ಬಾರಿ ಆಡಿದ್ದಾರೆ. ಯುವ ಸರಣಿಯಲ್ಲಿ ಕಳೆದ ವರ್ಷ ಹಂಪಿ ವಾರಿಯರ್ಸ್‌ನಲ್ಲಿದ್ದರು.
ತುಂಬ ಸವಾಲುಗಳನ್ನು ಎದುರಿಸಿ ಬೆಳೆದ ಆಟಗಾರ ಸಾಯಿ. ನಮ್ಮ ಅಕಾಡೆಮಿಯಿಂದ ಅನೇಕರು ಉತ್ತಮ ಸಾಧನೆ ಮಾಡಿದ್ದಾರೆ. ಪ್ರೊ ಕಬಡ್ಡಿಗೆ ಆಯ್ಕೆಯಾಗಿರುವುದು ಇದೇ ಮೊದಲು.ಗೋಪಿನಾಥ್ ಕುಮಾರ್ ಉಮಾಮಹೇಶ್ವರಿ ಅಕಾಡೆಮಿ ಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.