
ಬೆಂಗಳೂರು: ನಗರದ ಸೆಲೆನೈಟ್ ಸ್ಪೋರ್ಟ್ಸ್ ಅಕಾಡೆಮಿಯ ಸಾಯಿ ಪುಷ್ಕರ್ ಅವರು ಒಡಿಶಾದ ಭುವನೇಶ್ವರದಲ್ಲಿ ಶನಿವಾರ ಮುಕ್ತಾಯಗೊಂಡ ಯೋನೆಕ್ಸ್-ಸನ್‌ರೈಸ್ 37ನೇ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
2023ರಲ್ಲಿ 13 ವರ್ಷದೊಳಗಿನ ವಿಭಾಗದಲ್ಲೂ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಸಾಯಿ ಪುಷ್ಕರ್ ಫೈನಲ್‌ನಲ್ಲಿ 21–17, 21–12ರಿಂದ ಹರ್ಷಿತ್ ಖತ್ರಿ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಪುಷ್ಕರ್ 21–8, 21–13ರಿಂದ ಶ್ರೀಚೇತನ್ ಶೌರ್ಯ ಅವರನ್ನು ಸೋಲಿಸಿದ್ದರು.
ಸೆಲೆನೈಟ್ ಅಕಾಡೆಮಿಯ ಆಟಗಾರರು ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 17 ವರ್ಷದೊಳಗಿನ ಬಾಲಕರ ಡಬಲ್ಸ್‌ನಲ್ಲಿ ಪವನ್ ಎಸ್– ಪುನೀತ್ ಎಸ್. ಜೋಡಿಯು 21–1–, 21–10ರಿಂದ ಆನಾಯನ್ ಬೋರಾ–ಮಾಲ್ಸಾವ್‌ಹ್ಲುವಾ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿತು.
17 ವರ್ಷದೊಳಗಿನ ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ವೃದ್ಧಿ ಪೊನ್ನಮ್ಮ ಮತ್ತು ಅದಿತಿ ದೀಪಕ್ ರಾಜ್ 21–19, 21–16ರಿಂದ ಅನನ್ಯಾ ಎ. ಮತ್ತು ಅಂಜನಾ ಮಣಿಕಂದನ್ ಅವರನ್ನು ಮಣಿಸಿದರು. ಮಿಶ್ರ ಡಬಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅದಿತಿ ದೀಪರ್ ರಾಜ್ ಮತ್ತು ಪುನೀತ್ ಜೋಡಿಯು 21–16, 21–14ರಿಂದ ಅರ್ಣವ್ ಶರ್ಮಾ ಮತ್ತು ಅಂಜನಾ ಅವರನ್ನು ಸೋಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.