ADVERTISEMENT

ಗ್ರೀಕೊ ರೋಮನ್ ಕುಸ್ತಿ ಕೋಚ್‌ ವಜಾ

ಪಿಟಿಐ
Published 11 ಜೂನ್ 2021, 10:29 IST
Last Updated 11 ಜೂನ್ 2021, 10:29 IST
ಗ್ರೀಕೊ ರೋಮನ್ ಶೈಲಿ ಕುಸ್ತಿ ಸ್ಪರ್ಧೆಯ ನೋಟ –ಎಎಫ್‌ಪಿ ಚಿತ್ರ
ಗ್ರೀಕೊ ರೋಮನ್ ಶೈಲಿ ಕುಸ್ತಿ ಸ್ಪರ್ಧೆಯ ನೋಟ –ಎಎಫ್‌ಪಿ ಚಿತ್ರ   

ನವದೆಹಲಿ: ನಿರೀಕ್ಷಿತ ಫಲಿತಾಂಶ ತಂದುಕೊಡಲು ಸಾಧ್ಯವಾಗದ ಕಾರಣ ಗ್ರೀಕೊ ರೋಮನ್ ಕುಸ್ತಿ ಕೋಚ್‌ ತೆಮೊ ಕಜರಶಿವಿಲಿ ಅವರನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಶುಕ್ರವಾರ ವಜಾ ಮಾಡಿದೆ. ಈ ಬಾರಿ ಒಲಿಂಪಿಕ್ಸ್‌ಗೆ ಭಾರತದ ಗ್ರೀಕೊ ರೋಮ್ ಕುಸ್ತಿಪಟುಗಳ ಪೈಕಿ ಯಾರಿಗೂ ಅವಕಾಶ ಸಿಗಲಿಲ್ಲ.

ಒಲಿಂಪಿಕ್ಸ್ ವರೆಗೂ ಗ್ರೀಕೊ ರೋಮನ್ ಕುಸ್ತಿಪಟುಗಳಿಗೆ ತರಬೇತಿ ನೀಡಲು ಜಾರ್ಜಿಯಾದ ಕಜರಶಿವಿಲಿ ಅವರೊಂದಿಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ನಡೆಯುತ್ತಿತ್ತು.

ಫ್ರೀಸ್ಟೈಲ್ ಕುಸ್ತಿಪಟುಗಳ ಪೈಕಿ ತಲಾ ನಾಲ್ವರು ಪುರುಷರು ಮತ್ತು ಮಹಿಳೆಯರು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ನ ಶಿಫಾರಸಿನ ಮೇರೆಗೆ ಕೋಚ್‌ ಜೊತೆಗಿನ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸಾಯ್ ತಿಳಿಸಿದೆ.

ADVERTISEMENT

‘ಅವರನ್ನು ಒಲಿಂಪಿಕ್ಸ್‌ಗಾಗಿಯೇ ನೇಮಕ ಮಾಡಲಾಗಿತ್ತು. ಆದರೆ ಫಲಿತಾಂಶ ಶೂನ್ಯ. ಅವರೊಂದಿಗಿನ ಒಪ್ಪಂದ ಈ ವರ್ಷದ ಆಗಸ್ಟ್ ವರೆಗೆ ಇತ್ತು. ಆದರೆ ಒಲಿಂಪಿಕ್ಸ್‌ಗೆ ಮುನ್ನ ಇನ್ನು ರಾಷ್ಟ್ರೀಯ ಶಿಬಿರ ಇಲ್ಲದ ಕಾರಣ ಈಗಲೇ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲು ಸಾಯ್‌ಗೆ ಶಿಫಾರಸು ಮಾಡಲಾಗಿತ್ತು’ ಎಂದು ಕುಸ್ತಿ ಫೆಡರೇಷನ್‌ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್‌ ತಿಳಿಸಿದ್ದಾರೆ.

ಒಲಿಂಪಿಕ್ಸ್ ನಂತರ ಹೊಸ ಕೋಚ್ ನೇಮಕ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.

ಫ್ರೀಸ್ಟೈಲ್ ಕೋಚ್‌ ಇರಾನ್‌ನ ಹೊಸೇನ್ ಕರಿಮಿ ಮತ್ತು ಮಹಿಳಾ ವಿಭಾಗದ ಕೋಚ್‌ ಅಮೆರಿಕದ ಆ್ಯಂಡ್ರ್ಯೂ ಕುಕ್ ಅವರನ್ನು ಅವಧಿಗಿಂತ ಮೊದಲೇ ಕುಸ್ತಿ ಫೆಡರೇಷನ್ ವಾಪಸ್ ಕಳುಹಿಸಿತ್ತು. ಅವರ ತಂತ್ರಗಳನ್ನು ಕರಗತ ಮಾಡಿಕೊಳ್ಳಲು ಭಾರತದ ಕುಸ್ತಿಪಟುಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಫೆಡರೇನಷ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.