ADVERTISEMENT

ಡೆನ್ಮಾರ್ಕ್‌ ಓಪನ್: ಹಿಂದೆ ಸರಿದ ಸೈನಾ, ಕಶ್ಯಪ್‌

ಪಿಟಿಐ
Published 6 ಅಕ್ಟೋಬರ್ 2020, 13:51 IST
Last Updated 6 ಅಕ್ಟೋಬರ್ 2020, 13:51 IST
ಸೈನಾ ನೆಹ್ವಾಲ್‌ ಹಾಗೂ ಪರುಪಳ್ಳಿ ಕಶ್ಯಪ್‌–ಪಿಟಿಐ ಚಿತ್ರ
ಸೈನಾ ನೆಹ್ವಾಲ್‌ ಹಾಗೂ ಪರುಪಳ್ಳಿ ಕಶ್ಯಪ್‌–ಪಿಟಿಐ ಚಿತ್ರ   

ನವದೆಹಲಿ: ಭಾರತದ ಬ್ಯಾಡ್ಮಿಂಟನ್‌ ಪಟುಗಳಾದ ಸೈನಾ ನೆಹ್ವಾಲ್‌ ಹಾಗೂ ಅವರ ಪತಿ ಪರುಪಳ್ಳಿ ಕಶ್ಯಪ್‌ ಅವರು ಡೆನ್ಮಾರ್ಕ್‌ ಓಪನ್‌ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಡೆನ್ಮಾರ್ಕ್‌ನ ಒಡೆನ್ಸ್‌ನಲ್ಲಿ ಅಕ್ಟೋಬರ್‌ 13ರಿಂದ ಈ ಟೂರ್ನಿ ನಿಗದಿಯಾಗಿದೆ.

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಬಳಿಕ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಫ್‌ ಟೂರ್ನಿಗಳು ಮಾರ್ಚ್‌ನಿಂದ ಸ್ಥಗಿತಗೊಂಡಿದ್ದವು. ಡೆನ್ಮಾರ್ಕ್‌ ಓಪನ್‌ ಮೂಲಕ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಗಳು ಪುನರಾರಂಭಗೊಳ್ಳಬೇಕಿದೆ.

'ಡೆನ್ಮಾರ್ಕ್‌ ಓಪನ್‌ನಲ್ಲಿ ಕಣಕ್ಕಿಳಿಯುತ್ತಿಲ್ಲ. ಮುಂದಿನ ವರ್ಷದ ಜನವರಿಯಿಂದ ಏಷ್ಯನ್‌ ಟೂರ್‌ ಮೂಲಕ ಅಂಗಣಕ್ಕೆ ಇಳಿಯಲು ನಿರ್ಧರಿಸಿದ್ದೇನೆ‘ ಎಂದು ಲಂಡನ್‌ ಒಲಿಂಪಿಕ್ಸ್‌ನ‌ ಕಂಚಿನ ಪದಕ ವಿಜೇತೆ ಸೈನಾ ಹೇಳಿದ್ದಾರೆ.

ADVERTISEMENT

ಕಶ್ಯಪ್‌ ಕೂಡ ಇದೇ ರೀತಿಯ ಕಾರಣಗಳನ್ನು ನೀಡಿದ್ದಾರೆ.

‘ಡೆನ್ಮಾರ್ಕ್‌ ಓಪನ್‌ ಟೂರ್ನಿಗೆ ತೆರಳಿ ಅಪಾಯ ಮೈಮೇಲೆದುಕೊಳ್ಳಲು ಬಯಸುವುದಿಲ್ಲ. ಏಷ್ಯನ್‌ ಟೂರ್ನಿಗಳ ಮೂಲಕ ಋತುವನ್ನು ಆರಂಭಿಸಲಿದ್ದೇವೆ‘ ಎಂದು ಕಶ್ಯಪ್‌ ನುಡಿದರು.

ಈ ಮೊದಲು ಟೂರ್ನಿಯಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿದ್ದ ಈ ದಂಪತಿ, ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಗೆ (ಬಿಎಐ) ತಮ್ಮ ಒಪ್ಪಿಗೆಯನ್ನೂ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.