ಡಿ.ಗುಕೇಶ್
(ಪಿಟಿಐ ಚಿತ್ರ)
ಸೇಂಟ್ ಲೂಯಿ, (ಅಮೆರಿಕ): ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ಸೇಂಟ್ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯ ಎರಡನೇ ದಿನವಾದ ಮಂಗಳವಾರ ಹೆಚ್ಚೇನೂ ಗಮನ ಸೆಳೆಯಲಿಲ್ಲ. ಒಂದು ಪಂದ್ಯ ಸೋತ ಅವರು ಎರಡು ಡ್ರಾ ಮಾಡಿಕೊಂಡಿದ್ದು ಜಂಟಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.
ಹತ್ತು ಮಂದಿ ಆಟಗಾರರು ಕಣದಲ್ಲಿರುವ ಈ ಟೂರ್ನಿಯು ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿದೆ. ಕೊನೆಯ ಸ್ಥಾನದಲ್ಲಿದ್ದ ಸ್ಯಾಮ್ ಶಂಕ್ಲಾಂಡ್ (ಅಮೆರಿಕ) ಎದುರು ಆಘಾತ ಅನುಭವಿಸಿದ್ದ ಗುಕೇಶ್ ನಂತರ ಫ್ರೆಂಚ್ ಗ್ರ್ಯಾಂಡ್‌ಮಾಸ್ಟರ್ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ಉಜ್ಬೇಕ್ ಆಟಗಾರ ನದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಡ್ರಾ ಮಾಡಿಕೊಂಡರು.
ಎರಡನೇ ದಿನದ ಕೊನೆಗೆ ಅಗ್ರಸ್ಥಾನವೂ ಬದಲಾಯಿತು. ಐದನೇ ಸುತ್ತಿನವರೆಗೆ ಮುನ್ನಡೆ ಸಾಧಿಸಿದ್ದ ಅಮೆರಿಕದ ಜಿಎಂ ಲೆವೊನ್ ಅರೋನಿಯನ್ ಅವರನ್ನು ದಿನದ ಕೊನೆಯ (ಆರನೇ) ಸುತ್ತಿನಲ್ಲಿ ಸೋಲಿಸಿದ ಅದೇ ದೇಶದ ಫ್ಯಾಬಿಯಾನೊ ಕರುವಾನ (ಅಮೆರಿಕ) ಎರಡು ಪಾಯಿಂಟ್‌ಗಳ ಲೀಡ್ ಪಡೆದು ಅಗ್ರಸ್ಥಾನಕ್ಕೇರಿದರು.
ಗುಕೇಶ್ ಅವರ ರೀತಿಯಲ್ಲೇ ಅರೋನಿಯನ್ ಕೂಡ ಒಂದು ಪಂದ್ಯ ಸೋತು ಎರಡನ್ನು ಡ್ರಾ ಮಾಡಿಕೊಳ್ಳಬೇಕಾಯಿತು.
ರ‍್ಯಾಪಿಡ್ ವಿಭಾಗದಲ್ಲಿ ಇನ್ನು ಮೂರು ಸುತ್ತುಗಳಷ್ಟೇ ಬಾಕಿಯಿವೆ. ಕರುವಾನ (ಸಂಭವನೀಯ 12ರಲ್ಲಿ 10 ಪಾಯಿಂಟ್) ಈ ವಿಭಾಗ ಗೆಲ್ಲುವಂತೆ ಕಾಣುತ್ತಿದೆ. ಬ್ಲಿಟ್ಜ್ ವಿಭಾಗವು ಡಬಲ್ ರೌಂಡ್‌ರಾಬಿನ್ (18 ಸುತ್ತು) ಮಾದರಿಯಲ್ಲಿ ನಡೆಯಲಿದೆ.
ಅರೋನಿಯನ್ (8 ಪಾಯಿಂಟ್) ಅವರು ಸ್ವದೇಶದ ವೆಸ್ಲಿ ಸೊ ಅವರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೇಷಿಯರ್ ಲಗ್ರಾವ್ (7) ನಾಲ್ಕನೇ ಸ್ಥಾನದಲ್ಲಿದ್ದಾರೆ. ಗುಕೇಶ್ ಮತ್ತು ಅಮೆರಿಕದ ಡೊಮಿಂಗೆಝ್ ಪೆರೆಝ್ (ತಲಾ 6) ನಂತರದ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.