ADVERTISEMENT

ಬೆಳ್ಳಿಬೆಳಕಲ್ಲಿ ‘ಸ್ವಾತಂತ್ರ್ಯ’ದ ಹಂಬಲ

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸ್ವಾಯತ್ತ ಸ್ಥಾನ ಕನಸು ನನಸಾಗಿಸುವ ಯತ್ನ

ವಿಕ್ರಂ ಕಾಂತಿಕೆರೆ
Published 29 ಫೆಬ್ರುವರಿ 2020, 19:45 IST
Last Updated 29 ಫೆಬ್ರುವರಿ 2020, 19:45 IST
ಕರ್ನಾಟಕ ಕ್ರೀಡಾ ಪ್ರಾಧಿಕಾರ
ಕರ್ನಾಟಕ ಕ್ರೀಡಾ ಪ್ರಾಧಿಕಾರ   

ಬೆಂಗಳೂರು: ಬೆಳ್ಳಿಹಬ್ಬದ ಸಂಭ್ರಮಕ್ಕೆ ಸಜ್ಜಾಗಿರುವ ಕರ್ನಾಟಕ ಕ್ರೀಡಾ ಪ್ರಾಧಿಕಾರ (ಸ್ಯಾಕ್) ‘ಸ್ವಾತಂತ್ರ್ಯ’ಕ್ಕಾಗಿ ಹಪಹಪಿಸುತ್ತಿದ್ದು ಇದಕ್ಕಾಗಿ ಸರ್ಕಾರದ ಮೊರೆ ಹೋಗಿದೆ.

ಮೈಸೂರು ರಾಜ್ಯ ಕ್ರೀಡಾ ಸಮಿತಿಯನ್ನು 1995ರಲ್ಲಿ ಕ್ರೀಡಾ ಪ್ರಾಧಿಕಾರ ಎಂಬ ಸ್ವಾಯತ್ತ ಸಂಸ್ಥೆಯಾಗಿ ಮಾರ್ಪಡಿಸಲಾಯಿತು. ಭಾರತ ಕ್ರೀಡಾ ಪ್ರಾಧಿಕಾರದ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಕೆಲವು ರಾಜ್ಯಗಳಲ್ಲಿದ್ದು ಕರ್ನಾಟಕದಲ್ಲೂ ಪ್ರಾಧಿಕಾರ ರಚನೆ ಮಾಡಲಾಗಿದೆ, ಇದು ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಸರ್ಕಾರವೇ ಹೇಳಿಕೊಂಡಿತ್ತು.

ಇದನ್ನು 1996ರ ಏಪ್ರಿಲ್ 4ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದಾಗಿ ಕಾಲು ಶತಮಾನ ಸಮೀಪಿಸುತ್ತಿದೆ. 11 ಮಂದಿ ಅಧ್ಯಕ್ಷರು ಅಧಿಕಾರ ವಹಿಸಿ ಹೋಗಿದ್ದಾರೆ. ಆದರೆ ಸ್ವಾಯತ್ತ ಅಧಿಕಾರದ ಕನಸು ನನಸಲಾಗಲೇ ಇಲ್ಲ.

ADVERTISEMENT

ಈಗ ಈ ವಿಷಯ ಮುನ್ನೆಲೆಗೆ ಬಂದಿದ್ದು ಪ್ರಾಧಿಕಾರವನ್ನು ಪೂರ್ಣ ಅಧಿಕಾರ ನೀಡುವಂತೆ ಸರ್ಕಾರ ವನ್ನು ಸ್ಯಾಕ್ ಒತ್ತಾಯಿಸತೊಡಗಿದೆ. ಈ ಸಂಬಂಧ ಅಧ್ಯಕ್ಷ ಕೆ.ಪಿ.ಪುರುಷೋತ್ತಮ್ ಅವರು ಮೂರು ತಿಂಗಳಿಂದ ಸರ್ಕಾರಕ್ಕೆ ಪತ್ರಗಳನ್ನು ಬರೆದಿದ್ದಾರೆ.

’ಕ್ರೀಡಾ ಇಲಾಖೆಯ ಅಡಿಯಲ್ಲಿ ಇರುವ ಸ್ಯಾಕ್ ನಿಂತ ನೀರು. ಸ್ವತಂತ್ರವಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಆಗುತ್ತಿಲ್ಲ. ಇದರಿಂದ ಕ್ರೀಡಾಪಟುಗಳು ಮತ್ತು ರಾಜ್ಯದ ಕ್ರೀಡಾ ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಕ್ರೀಡಾ ಚಟುವಟಿಕೆಗೆ ಚುರುಕು ಮುಟ್ಟಿಸುವುದು ಈ ಪ್ರಯತ್ನದ ಉದ್ದೇಶ’ ಎಂದು ಪುರು ಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಾಯತ್ತ ಸಂಸ್ಥೆಯ ಸ್ಥಾನ ನೀಡಿದಾಗ 10 ಯೋಜನೆಗಳನ್ನು ಕ್ರೀಡಾ ಇಲಾಖೆಯಿಂದ ಸ್ಯಾಕ್‌ಗೆ ವರ್ಗಾಯಿಸಲಾಗಿದೆ. ಆದರೆ ಈಗ ಯಾವುದೂ ಸ್ಯಾಕ್ ಹಿಡಿತದಲ್ಲಿಲ್ಲ. ಇದರಿಂದ ರಾಜ್ಯದಲ್ಲಿ ಕ್ರೀಡಾಚಟುವಟಿಕೆ ಕುಂಠಿತಗೊಂಡಿದೆ. ಬೆಂಗಳೂರಿನಲ್ಲಿ 1984ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಾಗ ದೇಶದ ಕ್ರೀಡಾ ಭೂಪಟದಲ್ಲಿ ಎರಡನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ ಏಳನೇ ಸ್ಥಾನಕ್ಕೆ ಕುಸಿದಿದೆ’ ಎಂದು ಕೊಕ್ಕೊ ಆಟಗಾರರೂ ಆಗಿರುವ ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದರು.

ಏನೇನು ಅನುಕೂಲ?: ಪ್ರಾಧಿಕಾರ ಸ್ವತಂತ್ರವಾದರೆ ಇದ ಕ್ಕಾಗಿಯೇ ಮಹಾ ನಿರ್ದೇಶಕ ಹುದ್ದೆ ಸೃಷ್ಟಿಯಾಗಲಿದೆ. ಈಗ ಕ್ರೀಡಾ ಇಲಾಖೆಯ ಆಯುಕ್ತರ ಅಡಿ ಕಾರ್ಯನಿರ್ವಹಿಸುವ ಸಂಸ್ಥೆಗೆ ಇವರು ಸ್ವತಂತ್ರ ಅಧಿಕಾರಿಯಾಗಿರುತ್ತಾರೆ.

ಇದರೊಂದಿಗೆ ಪ್ರತಿ ತಾಲ್ಲೂಕಿಗೆ ಇಬ್ಬರು ಕೋಚ್‌ಗಳು, ಜಿಲ್ಲೆಗೆ ಒಬ್ಬ ಕ್ರೀಡಾಧಿಕಾರಿ, ಪ್ರತಿ ವಲಯಕ್ಕೆ ಒಬ್ಬ ಉಪನಿರ್ದೇಶಕರ ನೇಮಕ ಮಾಡಲು ಅವಕಾಶವಿದೆ. ಕ್ರೀಡಾ ನಿಲಯಗಳಲ್ಲಿ ಪೂರ್ಣಪ್ರಮಾಣದ ಸಿಬ್ಬಂದಿ ನೇಮಕಾತಿ ಮತ್ತು ಕೋಚ್‌ಗಳ ವೇತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಸ್ಯಾಕ್‌ಗೆ ವರ್ಗಾಯಿಸಿರುವ ಯೋಜನೆಗಳು
* ರಾಜ್ಯ–ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮತ್ತು ವಿದ್ಯಾರ್ಥಿ ವೇತನ ಹಂಚಿಕೆ
* ಜಿಲ್ಲೆಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ನೆರವು
* ಉತ್ತಮ ಕ್ರೀಡಾಪಟುಗಳಿಗೆ ಪ್ರಶಸ್ತಿ, ಉತ್ತೇಜನ
* ಕ್ರೀಡಾಕೂಟಗಳ ಆಯೋಜನೆಗಾಗಿ ಕೇಂದ್ರ ವಲಯ ಯೋಜನೆ ಜಾರಿ
* ಕ್ರೀಡಾಂಗಣಗಳ ನಿರ್ವಹಣೆ ಮಾಡುವುದು
* ರಾಜ್ಯದ ಕ್ರೀಡಾ ಸಂಸ್ಥೆಗಳ ನಿರ್ವಹಣೆ
* ರಾಜ್ಯದ ಕ್ರೀಡಾ ಸಂಸ್ಥೆಗಳಿಗೆ ಅನುದಾನ ವಿತರಣೆ
* ಕ್ರೀಡಾ ಶಾಲೆ, ವಸತಿನಿಲಯ, ಸಿಬ್ಬಂದಿ ವೇತನ ಇತ್ಯಾದಿಗಳ ನಿರ್ವಹಣೆ
* ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಯೋಜನೆ ಅನುಷ್ಠಾನಗೊಳಿಸುವುದು
* ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜನೆ
* ಜಿಲ್ಲಾ ಮಟ್ಟದಲ್ಲಿ ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ, ನಿರ್ವಹಣೆ

**

ಅಧ್ಯಕ್ಷ ಸ್ಥಾನ ಎಂಬುದು ಸೌಲಭ್ಯಗಳನ್ನು ಪಡೆದುಕೊಳ್ಳಲಷ್ಟೇ ಸೀಮಿತವಾಗಿದೆ. ಕ್ರೀಡಾಪಟುವಾಗಿ ನನಗೆ ಈ ಕಾರ್ಯವಿಧಾನ ಇಷ್ಟವಾಗುತ್ತಿಲ್ಲ.
–ಕೆ.ಪಿ.ಪುರುಷೋತ್ತಮ್ ಸ್ಯಾಕ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.