ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್, ಯುಗಾಂಡಾದ ಜೋಷುವಾ ಚೆಪ್ಟೆಗಿ ಅವರು ಭಾನುವಾರ ನಡೆದ 17ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಎಲೀಟ್ ಪುರುಷರ ವಿಭಾಗದ ಚಿನ್ನ ಗೆದ್ದರು. ಅವರದೇ ದೇಶದ ದೂರ ಅಂತರದ ಓಟಗಾರ್ತಿ ಸಾರಾ ಚೆಲಂಗತ್ ಅವರು ಮಹಿಳೆಯರ ವಿಭಾಗದ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಜೊತೆಗೆ ಬೆಂಗಳೂರಿನಲ್ಲಿ ಟಿಸಿಎಸ್ ಪ್ರಶಸ್ತಿ ಗೆದ್ದ ಯುಗಾಂಡಾದ ಮೊದಲ ಅಥ್ಲೀಟ್‌ಗಳು ಎಂಬ ಹಿರಿಮೆಗೆ ಅವರಿಬ್ಬರೂ ಪಾತ್ರರಾದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಅವಳಿ ಪದಕ ಗೆದ್ದಿರುವ 28 ವರ್ಷ ವಯಸ್ಸಿನ ಚೆಪ್ಟೆಗಿ ಅವರ ಓಟದ ಮೇಲೆಯೇ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ನಿರೀಕ್ಷೆಯಂತೆ 27 ನಿಮಿಷ 53 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದ ಅವರು ₹22.19 ಲಕ್ಷ ಬಹುಮಾನ ತನ್ನದಾಗಿಸಿಕೊಂಡರು. ಆದರೆ, ಕೂಟ ದಾಖಲೆಯ ಅವಕಾಶವನ್ನು 15 ಸೆಕೆಂಡ್‌ಗಳಿಂದ ತಪ್ಪಿಸಿಕೊಂಡರು. ಕೂಟ ದಾಖಲೆಗಾಗಿ ₹6.82 ಲಕ್ಷ ಬೋನಸ್ ಬಹುಮಾನ ನಿಗದಿಯಾಗಿತ್ತು.
2014ರಲ್ಲಿ ಇದೇ ಕೂಟದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗೆ ಪದಾರ್ಪಣೆ ಮಾಡಿದ್ದ ಚೆಪ್ಟೆಗಿ ಮೊದಲ ಪ್ರಯತ್ನದಲ್ಲೇ ಬೆಳ್ಳಿ ಪದಕ ಗೆದ್ದಿದ್ದರು. 2020ರಲ್ಲಿ 10 ಸಾವಿರ ಮೀಟರ್ ದೂರವನ್ನು 26 ನಿಮಿಷ 11 ಸೆಕೆಂಡ್‌ಗಳಲ್ಲಿ ತಲುಪಿ ವಿಶ್ವದಾಖಲೆ ನಿರ್ಮಿಸಿರುವ ಚೆಪ್ಟೆಗಿ ಅವರು ಎಂಟು ಕಿ.ಮೀ. ತನಕ ಇತರ ನಾಲ್ವರು ಸ್ಪರ್ಧಿಗಳ ಜೊತೆಯಾಗಿ ಮುನ್ನಡೆದರು. ಆದರೆ, ಕೊನೆಯ ಹಂತದಲ್ಲಿ ವೇಗ ಹೆಚ್ಚಿಸಿಕೊಂಡು ಗೆದ್ದರು. ಅವರಿಗೆ ಎರಿಟ್ರಿಯಾದ 17 ವರ್ಷ ವಯಸ್ಸಿನ ಸೈಮನ್ ಟೆಸ್ಫಾಗಿಯೋರ್ಗಿಸ್ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ಕೇವಲ ಎರಡು ಸೆಕೆಂಡ್ ಅಂತರದಲ್ಲಿ ಸೈಮನ್ ಚಿನ್ನದ ಅವಕಾಶ ಕಳೆದುಕೊಂಡರು. ಕೆನ್ಯಾದ ವಿನ್ಸೆಂಟ್ ಲ್ಯಾಂಗಟ್ ಕಂಚಿನ ಪದಕ ಜಯಿಸಿದರು. ಅಗ್ರ 10ರಲ್ಲಿ ಕೆನ್ಯಾದ ಮೂವರು ಮತ್ತು ಇಥಿಯೋಪಿಯಾದ ಇಬ್ಬರು ಅಥ್ಲೀಟ್‌ಗಳು ಸ್ಥಾನ ಪಡೆದರು.
ಸಾರಾಗೆ ಚಿನ್ನ:
10 ಸಾವಿರ ಮೀಟರ್ ಓಟದಲ್ಲಿ ಯುಗಾಂಡಾದ ರಾಷ್ಟ್ರೀಯ ದಾಖಲೆ (30 ನಿ.24ಸೆ) ಹೊಂದಿರುವ 23 ವರ್ಷ ವಯಸ್ಸಿನ ಸಾರಾ 31 ನಿಮಿಷ 07 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಅವರೂ 11 ಸೆಕೆಂಡ್‌ಗಳ ಅಂತರದಿಂದ ಕೂಟ ದಾಖಲೆಯ ಅವಕಾಶದಿಂದ ವಂಚಿತರಾದರು. ಆರಂಭದಿಂದಲೇ ಇತರ ಸ್ಪರ್ಧಿಗಳಿಗಿಂತ ಅಂತರ ಕಾಯ್ದುಕೊಂಡ ಅವರು ಕೊನೆಯವರೆಗೂ ಅವರಿಗೆ ಯಾರೂ ಸರಿಸಾಟಿಯಾಗಲಿಲ್ಲ. ಅವರಿಗಿಂತ 57 ಸೆಕೆಂಡ್ ನಂತರ ಗುರಿ ತಲುಪಿದ ಕೆನ್ಯಾದ ಸಿಂಥಿಯಾ ಚೆಪ್ಜೆನೊ ಬೆಳ್ಳಿ ಮತ್ತು ಇಥಿಯೋಪಿಯಾದ ಗುಟೇನಿ ಶಾಂಕೊ ಕಂಚು ಗೆದ್ದರು. ಕೆನ್ಯಾದ ಆರು ಮತ್ತು ಇಥಿಯೋಪಿಯಾದ ಮೂವರು ಅಗ್ರ 10ರಲ್ಲಿ ಇದ್ದರು.
ಅಭಿಷೇಕ್‌ಗೆ ಎರಡನೇ ಚಿನ್ನ:
ಉತ್ತರ ಪ್ರದೇಶದ 29 ವರ್ಷ ವಯಸ್ಸಿನ ಅಭಿಷೇಕ್ ಪಾಲ್ ಅವರು ಎಲೀಟ್ ಪುರುಷರ ಭಾರತೀಯರ ವಿಭಾಗದಲ್ಲಿ 29 ನಿಮಿಷ 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ಕೂಟ ದಾಖಲೆ ನಿರ್ಮಿಸಿದರು. ಕಳೆದ ಆವೃತ್ತಿಯಲ್ಲಿ ಮಹಾರಾಷ್ಟ್ರದ ಕಿರಣ್ ಮಾತ್ರೆ (29 ನಿ. 32 ಸೆ.) ನಿರ್ಮಿಸಿದ್ದ ದಾಖಲೆ ಅಳಿಸಿದರು. ₹3 ಲಕ್ಷ ಬಹುಮಾನದೊಂದಿಗೆ ಕೂಟ ದಾಖಲೆಗಾಗಿ ₹1 ಲಕ್ಷ ಬೋನಸ್ ಜೇಬಿಗಿಳಿಸಿಕೊಂಡರು.
ನಾಲ್ಕು ದಿನಗಳ ಹಿಂದೆ ಫೆಡರೇಷನ್ ಕಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅಭಿಷೇಕ್ ಅವರಿಗೆ ಇಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು (28ನಿ.54ಸೆ) ಮೀರಲು ಸಾಧ್ಯವಾಗಲಿಲ್ಲ. 2022ರಲ್ಲೂ ಚಾಂಪಿಯನ್ ಆಗಿದ್ದ ಅವರಿಗೆ ಇದು ಎರಡನೇ ಚಿನ್ನವಾಗಿದೆ. ಮೊದಲ ಎರಡು ಕಿ.ಮೀ. ತಲುಪುವ ವೇಳೆಗೆ ಎರಡನೇ ಸ್ಥಾನದಲ್ಲಿದ್ದ ಅಭಿಷೇಕ್ ನಂತರದಲ್ಲಿ ವೇಗವನ್ನು ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿದರು. ಹಿಮಾಚಲ ಪ್ರದೇಶದ ಸಾವನ್ ಬರ್ವಾಲ್ ಬೆಳ್ಳಿ ಪದಕ ಗೆದ್ದರು. ಫೆಡರೇಷನ್ ಕಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಅವರಿಗೆ ಇಲ್ಲಿ ಹಿನ್ನಡೆಯಾಯಿತು. ಕಳೆದ ಆವೃತ್ತಿಯ ಚಾಂಪಿಯನ್ ಕಿರಣ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಸಂಜೀವನಿಗೆ ನಾಲ್ಕನೇ ಪದಕ:
ಮಹಾರಾಷ್ಟ್ರದ ಸಂಜೀವನಿ ಜಾಧವ್ ಅವರು ಎಲೀಟ್ ಮಹಿಳೆಯರ ಭಾರತೀಯರ ವಿಭಾಗದಲ್ಲಿ (34ನಿ. 16ಸೆ) ಪ್ರಶಸ್ತಿ ಉಳಿಸಿಕೊಳ್ಳುವ ಜೊತೆಗೆ ಇಲ್ಲಿ ನಾಲ್ಕನೇ ಪದಕಕ್ಕೆ ಕೊರಳೊಡ್ಡಿದರು. 2018ರಲ್ಲಿ ಕೂಟ ದಾಖಲೆ (33ನಿ.38ಸೆ) ಬರೆದಿದ್ದ ಅವರು, 2022ರಲ್ಲಿ ಬೆಳ್ಳಿಯ ಸಾಧನೆ ಮೆರೆದಿದ್ದರು. 28 ವರ್ಷ ವಯಸ್ಸಿನ ಸಂಜೀವನಿ ಪ್ರಾರಂಭದಿಂದಲೇ ಮುನ್ನಡೆ ಕಾಯ್ದುಕೊಂಡು, ಕ್ರಮೇಣ ವಿಸ್ತರಿಸುತ್ತಾ ಸಾಗಿ ಅಧಿಕಾರಯುತವಾಗಿ ಗೆಲುವು ಸಾಧಿಸಿದರು. ಅವರಿಗಿಂತ 1 ನಿಮಿಷ 20 ಸೆಕೆಂಡ್ ತಡವಾಗಿ ದಡ ಸೇರಿದ ಭಾರ್ತಿ ನೈನ್ ಬೆಳ್ಳಿ ಮತ್ತು 2023ರ ಬೆಳ್ಳಿ ವಿಜೇತೆ ಮಹಾರಾಷ್ಟ್ರದ ಪೂನಮ್ ಸೋನುನೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.