ADVERTISEMENT

Asian Games | Badminton: ಪುರುಷರ ಡಬಲ್ಸ್‌ ಫೈನಲ್‌ಗೆ ಸಾತ್ವಿಕ್‌–ಚಿರಾಗ್‌

ಸಿಂಗಲ್ಸ್‌ನಲ್ಲಿ ಪ್ರಣಯ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:31 IST
Last Updated 6 ಅಕ್ಟೋಬರ್ 2023, 16:31 IST
<div class="paragraphs"><p>ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ</p></div>

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ

   

ಹಾಂಗ್‌ಝೌ: ಭಾರತದ ಬ್ಯಾಡ್ಮಿಂಟನ್‌ ಆಟಗಾರ ಎಚ್‌.ಎಸ್‌.ಪ್ರಣಯ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕದೊಂದಿಗೆ ತಮ್ಮ ಅಭಿಯಾನ ಕೊನೆಗೊಳಿಸಿದರು. ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತ, 41 ವರ್ಷಗಳ ಬಳಿಕ ಪದಕ ಗೆದ್ದ ಸಾಧನೆ ಮಾಡಿದೆ.

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದ್ದು, ಬ್ಯಾಡ್ಮಿಂಟನ್‌ನಲ್ಲಿ ಮೊದಲ ಚಿನ್ನ ಗೆಲ್ಲುವ ಭರವಸೆ ಮೂಡಿಸಿದೆ.

ADVERTISEMENT

ಡಬಲ್ಸ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ 21–17, 21–12 ರಿಂದ ಮಲೇಷ್ಯಾದ ಆ್ಯರನ್‌ ಚಿಯಾ– ಸೊ ವೂ ಯಿಕ್‌ ಅವರನ್ನು ಮಣಿಸಿದರು. ಇದಕ್ಕಾಗಿ ಅವರು 46 ನಿಮಿಷಗಳನ್ನು ತೆಗೆದುಕೊಂಡರು.

ಸಾತ್ವಿಕ್‌ ಮತ್ತು ಚಿರಾಗ್‌ ಈ ಮೂಲಕ ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಖಚಿತಪಡಿಸಿಕೊಂಡರು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಅವರು ಕೊರಿಯಾದ ಚೊಯ್ ಸೊಲ್ ಗ್ಯು– ಕಿಮ್‌ ವೊನ್ ಹೊ ವಿರುದ್ಧ ಪೈಪೋಟಿ ನಡೆಸುವರು. ಭಾರತದ ಜೋಡಿ, ಕೊರಿಯಾದ ಆಟಗಾರರ ವಿರುದ್ಧ 2–0 ಗೆಲುವಿನ ದಾಖಲೆ ಹೊಂದಿದ್ದಾರೆ.

ಸೆಮಿಯಲ್ಲಿ ಎಡವಿದ ಪ್ರಣಯ್‌:

ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಣಯ್ 16–21, 9–21 ರಿಂದ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಚೀನಾದ ಲಿ ಶಿ ಫೆಂಗ್‌ ಎದುರು ಮಣಿದರು. ಇದರಿಂದ ಕಂಚಿನ ಪದಕದೊಂದಿಗೆ ಅವರ ಹೋರಾಟಕ್ಕೆ ತೆರೆಬಿತ್ತು.

ಏಷ್ಯನ್‌ ಕ್ರೀಡಾಕೂಟದ ಪುರುಷರ ಸಿಂಗಲ್ಸ್‌ನಲ್ಲಿ ಭಾರತ ಗೆದ್ದ ಎರಡನೇ ಪದಕ ಇದು. 1982ರ ನವದೆಹಲಿ ಕೂಟದಲ್ಲಿ ಸೈಯದ್‌ ಮೋದಿ ಅವರು ಕಂಚು ಗೆದ್ದುಕೊಂಡಿದ್ದರು.

31 ವರ್ಷದ ಪ್ರಣಯ್‌ ಅವರಿಗೆ ಈ ಪಂದ್ಯದಲ್ಲೂ ಬೆನ್ನುನೋವು ಕಾಡಿತು. ಎಂದಿನ ಲಯದಲ್ಲಿ ಆಡಲು ವಿಫಲರಾದ ಅವರಿಂದ ಸಾಕಷ್ಟ ಸ್ವಯಂಕೃತ ತಪ್ಪುಗಳು ಉಂಟಾದವು.

ಭಾರತದ ಆಟಗಾರ ಮೊದಲ ಗೇಮ್‌ನ ಆರಂಭದಲ್ಲಿ 3–1 ರಿಂದ ಮೇಲುಗೈ ಪಡೆದಿದ್ದರು. ಆದರೆ ಪಂದ್ಯ ಮುಂದುವರಿದಂತೆ ಅವರಿಂದ ತಪ್ಪುಗಳು ಉಂಟಾದವು. ಇದರ ಲಾಭ ತನ್ನದಾಗಿಸಿಕೊಂಡ ಫೆಂಗ್‌ ಮರುಹೋರಾಟ ನಡೆಸಿ 10–10 ರಿಂದ ಸಮಬಲ ಸಾಧಿಸಿದರು.

ವೇಗದ ಸ್ಮ್ಯಾಷ್‌ಗಳು ಮತ್ತು ಚಾಣಾಕ್ಷ ಡ್ರಾಪ್‌ ಶಾಟ್‌ಗಳ ಮೂಲಕ ಪಾಯಿಂಟ್‌ಗಳನ್ನು ಹಿಗ್ಗಿಸಿಕೊಂಡರಲ್ಲದೆ, 17–14 ರಿಂದ ಮುನ್ನಡೆ ಪಡೆದರು. ಲೀಡ್‌ ಕಾಪಾಡಿಕೊಂಡು ಗೇಮ್‌ ಗೆದ್ದರು.

ಎರಡನೇ ಗೇಮ್‌ನ ಆರಂಭದಲ್ಲಿ ಜಿದ್ದಾಜಿದ್ದಿನ ಸೆಣಸಾಟ ನಡೆದು 4–4 ರಿಂದ ಸಮಬಲ ಕಂಡುಬಂತು. ಆ ಬಳಿಕ ಸತತ ನಾಲ್ಕು ಪಾಯಿಂಟ್ಸ್‌ ಗಳಿಸಿದ ಲಿ 8–4 ರಿಂದ ಮುನ್ನಡೆ ಪಡೆದರು. ಅನಂತರ ಪ್ರಣಯ್‌ಗೆ ಮರುಹೋರಾಟ ನಡೆಸಲು ಅವಕಾಶ ನೀಡದೆ ಫೈನಲ್‌ಗೆ ಲಗ್ಗೆಯಿಟ್ಟರು.

‘ಚೆನ್ನಾಗಿ ಆಡಿದ ಲಿಗೆ ಗೆಲುವಿನ ಶ್ರೇಯ ಸಲ್ಲಬೇಕು. ಅವರು ನನ್ನನ್ನು ಸೋಲಿಸಿದ್ದು ಇದೇ ಮೊದಲು. ನನ್ನ ಫಿಟ್‌ನೆಸ್‌ ಮಟ್ಟ ಕೂಡಾ ಆಟದ ಮೇಲೆ ಪರಿಣಾಮ ಬೀರಿತು’ ಎಂದು ಪ್ರಣಯ್‌ ಪ್ರತಿಕ್ರಿಯಿಸಿದರು.

ಎಚ್‌.ಎಸ್‌.ಪ್ರಣಯ್‌ ಆಟದ ವೈಖರಿ

41 ವರ್ಷಗಳ ಬಳಿಕ ಭಾರತಕ್ಕೆ ಮೊದಲ ಪದಕ ಸೆಮಿಯಲ್ಲಿ ಲಿ ಶಿ ಫೆಂಗ್‌ ಎದುರು ಮಣಿದ ಪ್ರಣಯ್ ಸಾತ್ವಿಕ್–ಚಿರಾಗ್‌ಗೆ ಫೈನಲ್‌ನಲ್ಲಿ ಕೊರಿಯಾ ಜೋಡಿ ಸವಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.