ADVERTISEMENT

ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಸಾತ್ವಿಕ್–ಚಿರಾಗ್

ಪಿಟಿಐ
Published 9 ಜನವರಿ 2025, 22:44 IST
Last Updated 9 ಜನವರಿ 2025, 22:44 IST
<div class="paragraphs"><p>ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಪಿಟಿಐ ಸಂಗ್ರಹ ಚಿತ್ರ</p></div>

ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಪಿಟಿಐ ಸಂಗ್ರಹ ಚಿತ್ರ

   

ಕ್ವಾಲಾಲಂಪುರ: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಗುರುವಾರ ಮಲೇಷ್ಯಾ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಆದರೆ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್ ಎರಡನೇ ಸುತ್ತಿನಲ್ಲಿ ವೀರೋಚಿತ ಹೋರಾಟ ತೋರಿದರೂ ಸೋಲನುಭವಿಸಿದರು.

ಸಾತ್ವಿಕ್‌– ಚಿರಾಗ್ ಜೋಡಿ 43 ನಿಮಿಷಗಳವರೆಗೆ ನಡೆದ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21–15, 21–15 ರಿಂದ ಮಲೇಷ್ಯಾದ ಎನ್‌.ಅಝ್ರಿನ್‌– ತಾನ್ ಡಬ್ಲ್ಯುಕೆ ಜೋಡಿಯನ್ನು ಸೋಲಿಸಿತು. ಏಳನೇ ಶ್ರೇಯಾಂಕದ ಭಾರತದ ಜೋಡಿ ಎಂಟರ ಘಟ್ಟದ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾದ ಯು ಸಿನ್ ಒಂಗ್– ಯೆ ಇ ಟಿಯೊ ಜೋಡಿಯನ್ನು ಎದುರಿಸಲಿದೆ.

ADVERTISEMENT

‘ಮತ್ತೆ ಬಿಡಬ್ಲ್ಯುಎಫ್‌ ಪ್ರವಾಸಕ್ಕೆ ಹಿಂತಿರುಗಿದ್ದರಿಂದ ಸಂತಸವಾಗಿದೆ. ಟೂರ್ನಿಯಲ್ಲಿ ಸಾಧ್ಯವಾದಷ್ಟು ಮುಂದಿನ ಹಂತಕ್ಕೆ ಹೋಗಲು ಪ್ರಯತ್ನಿಸುತ್ತೇವೆ’ ಎಂದು ಪಂದ್ಯದ ನಂತರ ಚಿರಾಗ್ ಪ್ರತಿಕ್ರಿಯಿಸಿದರು.

‘ಹೊಸ ಕೋಚ್‌ (ಮಲೇಷ್ಯಾದ ತಾನ್‌ ಕಿಮ್‌ ಹರ್‌) ಜೊತೆ ತರಬೇತಿ ಪಡೆಯುತ್ತಿದ್ದೇವೆ. ಈ ಹಿಂದೆಯೂ ಇದೇ ಕೋಚ್‌ ಜೊತೆ ಕೆಲಸ ಮಾಡಿದ್ದೇವೆ. ನಾವಿಬ್ಬರು ಕಿರಿಯ ಆಟಗಾರರಾಗಿದ್ದ ಕಾಲದಲ್ಲಿ ಸಾತ್ವಿಕ್ ಅವರನ್ನು ನನ್ನ ಡಬಲ್ಸ್‌ ಜೊತೆಗಾರನನ್ನಾಗಿ ಮಾಡಿದ್ದು ಅವರು’ ಎಂದು ಹೇಳಿದರು.

ಡಬಲ್ಸ್‌ನಲ್ಲಿ ನಿರಾಸೆ:

ಮಹಿಳೆಯರ ಡಬಲ್ಸ್‌ 16ರ ಸುತ್ತಿನ ಪಂದ್ಯದಲ್ಲಿ ಭಾರತದ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್‌ ಜೋಡಿ ಆಘಾತ ಅನುಭವಿಸಿತು. ಚೀನಾದ ಜಿಯಾ ಯಿ– ಝಾಂಗ್ ಶೂ ಷಿಯಾನ್ ಅವರು ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ 15–21, 21–19, 21–19 ರಿಂದ ಆರನೇ ಶ್ರೇಯಾಂಕದ ಭಾರತದ ಜೋಡಿಯ ಮೇಲೆ ಜಯಗಳಿಸಿದರು.

ಮಿಶ್ರ ಡಬಲ್ಸ್‌ನಲ್ಲೂ ಭಾರತದ ಸವಾಲು ಅಂತ್ಯಗೊಂಡಿತು. ಧ್ರುವ್ ಕಪಿಲಾ– ತನಿಶಾ ಕ್ರಾಸ್ಟೊ ಅವರು  13–21, 20–22 ರಲ್ಲಿ ಏಳನೇ ಶ್ರೇಯಾಂಕದ ಚೆಂಗ್‌ ಷಿಂಗ್‌– ಝಾಂಗ್ ಚಿ (ಚೀನಾ) ಜೋಡಿಗೆ 44 ನಿಮಿಷಗಳಲ್ಲಿ ಮಣಿದರು. ಸತೀಶ್‌ ಕರುಣಾಕರನ್– ಆದ್ಯಾ ವರಿಯತ್ ಜೋಡಿ 10–21, 17–21ರಲ್ಲಿ ನಾಲ್ಕನೇ ಶ್ರೇಯಾಂಕದ ಸೂನ್ ಹುವಾರ್‌ ಗೊ– ಶೆವೊನ್ ಜೆಮಿ ಲಾಯ್ (ಮಲೇಷ್ಯಾ) ಅವರೆದುರು ಸೋಲನುಭವಿಸಿತು.

ಮಾಳವಿಕಾ ಬನ್ಸೋಡ್‌ಗೆ ಸೋಲು

32 ವರ್ಷ ವಯಸ್ಸಿನ ಪ್ರಣಯ್ ಪುರುಷರ ಸಿಂಗಲ್ಸ್‌ನಲ್ಲಿ 8–21, 21–15, 21–13ರಲ್ಲಿ ಚೀನಾದ ಲಿ ಶಿ ಫೆಂಗ್‌ ಎದುರು  ಸೋಲನುಭವಿಸಿದರು. ಏಳನೇ ಶ್ರೇಯಾಂಕದ ಫೆಂಗ್ ಒಂದು ಗಂಟೆ 32 ನಿಮಿಷದಲ್ಲಿ ಪಂದ್ಯ ಗೆದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ಇದೇ ಮೊದಲ ಬಾರಿ ಪ್ರಣಯ್ ಟೂರ್ನಿಯೊಂದರಲ್ಲಿ ಆಡುತ್ತಿದ್ದಾರೆ.

ಮಾಳವಿಕಾ ಬನ್ಸೋಡ್ ಮಹಿಳೆಯರ ಸಿಂಗಲ್ಸ್ 16ರ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಹಾನ್‌ ಯು (ಚೀನಾ) ಎದುರು ಸೋಲನುಭವಿದರು. ಶ್ರೇಯಾಂಕರಹಿತ ಭಾರತದ ಆಟಗಾರ್ತಿ 18–21, 11–21 ರಲ್ಲಿ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.