
ಬ್ಯಾಂಕಾಕ್: ಭಾರತದ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಇಲ್ಲಿ ಮಂಗಳವಾರ ಆರಂಭವಾಗುವ ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವುದರೊಂದಿಗೆ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಬಹುದಾದ ನೆಚ್ಚಿನ ಜೋಡಿಗಳಲ್ಲಿ ಒಂದಾಗಿರುವ ಸಾತ್ವಿಕ್– ಚಿರಾಗ್ ಈಚೆಗೆ ನಡೆದ ಥಾಮಸ್ ಕಪ್‌ನಲ್ಲಿ ಮುಗ್ಗರಿಸಿದ್ದರು. ಇಂಡೊನೇಷ್ಯಾ ಮತ್ತು ಚೀನಾದ ಎದುರಾಳಿಗಳಿಗೆ ಶರಣಾಗಿದ್ದರು. ಇಲ್ಲಿ ಮಲೇಷ್ಯಾದ ನೂರ್ ಮೊಹಮ್ಮದ್ ಅಜ್ರಿನ್ ಅಯೂಬ್ ಮತ್ತು ತಾನ್ ವೀ ಕಿಯೊಂಗ್ ವಿರುದ್ಧ ಅಭಿಯಾನವನ್ನು ಆರಂಭಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ ಎಚ್.ಎಸ್. ಪ್ರಣಯ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಈ ಋತುವಿನಲ್ಲಿ ನಿರೀಕ್ಷಿತ ಆಟ ಪ್ರದರ್ಶಿಸಿಲ್ಲ. ಆದರೆ, ಥಾಮಸ್ ಕಪ್ ಟೂರ್ನಿಯಲ್ಲಿ ಇಂಡೊನೇಷ್ಯಾದ ಆ್ಯಂಟನಿ ಸಿನಿಸುಕ್ ಗಿಂಟಿಂಗ್ ಅವರಿಗೆ ಆಘಾತ ನೀಡಿ ಆತ್ಮವಿಶ್ವಾಸವನ್ನು ಕೊಂಚ ಹೆಚ್ಚಿಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಪ್ರಣಯ್ ಅವರಿಗೆ ಈ ಟೂರ್ನಿ ಪೂರ್ವಸಿದ್ಧತೆಯ ವೇದಿಕೆಯಾಗಿದೆ. ಅವರು ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಹಂತದ ಆಟಗಾರನನ್ನು ಎದುರಿಸಲಿದ್ದಾರೆ.
ಒಲಿಂಫಿಯನ್ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಿರಣ್ ಜಾರ್ಜ್ ಮತ್ತು ಸತೀಶ್ ಕುಮಾರ್ ಕರುಣಾಕರನ್ ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದಾರೆ. ಕಿರಣ್ ಮೊದಲ ಸುತ್ತಿನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಒಡಿಶಾ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದಿರುವ ಸತೀಶ್ ಅವರು ಕ್ವಾಲಿಫೈಯರ್ ಸುತ್ತಿನ ಆಟಗಾರನ ವಿರುದ್ಧ ಅಭಿಯಾನ ಆರಂಭಿಸುವರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಯುವ ಆಟಗಾರ್ತಿಯರಾದ ಅಶ್ಮಿತಾ ಚಾಲಿಹಾ, ಮಾಳವಿಕಾ ಬನ್ಸೋಡ್ ಮತ್ತು ಆಕರ್ಷಿ ಕಶ್ಯಪ್ ಸ್ಪರ್ಧೆಯಲ್ಲಿದ್ದಾರೆ. ಡಬಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ, ಉನ್ನತಿ ಹೂಡಾ– ಪಾಲಕ್ ಅರೋರಾ ಜೋಡಿಗಳು ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.