ADVERTISEMENT

ಭಾರತ ಕುಸ್ತಿ ಸಂಸ್ಥೆಗೆ ಚುನಾವಣೆ: ತಡೆಯಾಜ್ಞೆ ತೆರವು ಮಾಡಿದ ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 12:56 IST
Last Updated 28 ನವೆಂಬರ್ 2023, 12:56 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ಗೆ ಚುನಾವಣೆ ನಡೆಸುವುದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತೆರವುಗೊಳಿಸಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ಪಂಕಜ್ ಮಿತ್ತಲ್ ಅವರನ್ನು ಒಳಗೊಂಡ ಪೀಠ, ಹೈಕೋರ್ಟ್, ಇಡೀ ಚುನಾವಣಾ ಪ್ರಕ್ರಿಯೆಯನ್ನು ತಡೆಯೊಡ್ಡುವುದರ ಹಿಂದಿನ ಮರ್ಮ ತನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿತು.

ಹರಿಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬಾಕಿವುಳಿಸಿ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ADVERTISEMENT

‘ಚುನಾವಣೆ ನಡೆಸಲು ಅವಕಾಶ ಮಾಡಿಕೊಟ್ಟು, ಅರ್ಜಿಯ ವಿಚಾರಣೆ ಮುಗಿದ ನಂತರವಷ್ಟೇ, ಅದರ ಆಧಾರದ ಮೇಲೆ  ಫಲಿತಾಂಶ ಪ್ರಕಟಿಸಬಹುದು ಎಂದು ಹೇಳಿ ಆದೇಶ ನೀಡುವುದು ಸರಿಯಾದ ಮಾರ್ಗವಾಗುತಿತ್ತು’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಭಾರತ ಒಲಿಂಪಿಕ್ ಸಂಸ್ಥೆ ರಚಿಸಿದ ಅಡ್‌ಹಾಕ್ ಸಮಿತಿಯು ಕಳೆದ ಜುಲೈ 6ರಂದು ಚುನಾವಣೆಯನ್ನು ನಿಗದಿಪಡಿಸಿತ್ತು. ನಂತರ ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಹಿಮಾಚಲ ಪ್ರದೇಶ ಕುಸ್ತಿ ಸಂಸ್ಥೆಗಳ ಆಕ್ಷೇಪಗಳ ನಂತರ ಚುನಾವಣೆಯನ್ನು ಜುಲೈ 11ಕ್ಕೆ ಮುಂದೂಡಲಾಯಿತು. ನಂತರ ಅಸ್ಸಾಂ ಸಂಸ್ಥೆ ಚುನಾವಣೆಗೆ ತಡೆ ಕೋರಿ ಹೈಕೋರ್ಟ್‌ ಮೊರೆ ಹೋಗಿತ್ತು. ಅದು ತೆರವಾದರೂ, ಚುನಾವಣೆಗೆ ತಡೆ ಕೋರಿ ಹರಿಯಾಣ ಕುಸ್ತಿ ಸಂಸ್ಥೆಯು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಚುನಾವಣಾ ದಿನ ನಿ‌ರ್ಧಾರ ಇಂದು?

ತಡೆಯಾಜ್ಞೆ ತೆರವಾಗಿರುವ ಹಿನ್ನೆಲೆಯಲ್ಲಿ ಕುಸ್ತಿ ಫೆಡರೇಷನ್‌ಗೆ ಹೊಸದಾಗಿ ಚುನಾವಣಾ ದಿನಾಂಕ ನಿರ್ಧಾರವನ್ನು ಚುನಾವಣಾ ಅಧಿಕಾರಿ ಅವರು ಬುಧವಾರ ಪ್ರಕಟಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.