ADVERTISEMENT

ಬುದ್ಧ ಸರ್ಕೀಟ್‌ನಲ್ಲಿ ಗೆದ್ದ; ವೆಟಲ್‌ಗೆ ಆನೆ ಸವಾಲು!

ಬಸವರಾಜ ದಳವಾಯಿ
Published 4 ಅಕ್ಟೋಬರ್ 2020, 19:30 IST
Last Updated 4 ಅಕ್ಟೋಬರ್ 2020, 19:30 IST
ಸೆಬಾಸ್ಟಿಯನ್‌ ವೆಟಲ್‌– ಎಎಫ್‌ಪಿ ಚಿತ್ರ
ಸೆಬಾಸ್ಟಿಯನ್‌ ವೆಟಲ್‌– ಎಎಫ್‌ಪಿ ಚಿತ್ರ   

ಫಾರ್ಮುಲಾ ಒನ್ ಚಾಲಕ ಸೆಬಾಸ್ಟಿಯನ್‌ ವೆಟಲ್‌ ನಾಲ್ಕು ಬಾರಿ ವಿಶ್ವಚಾಂಪಿಯನ್‌ ಪಟ್ಟ ಧರಿಸಿದವರು. ಫೆರಾರಿ ರೇಸಿಂಗ್‌ ತಂಡದ ಜರ್ಮನಿಯ‌ ಈ ಸಾಹಸಿ ಮೋಟರ್‌ ರೇಸಿಂಗ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. 2011ರಲ್ಲಿ ಉತ್ತರಪ್ರದೇಶದ ಗ್ರೇಟರ್‌ ನೊಯ್ಡಾದ ಬುದ್ಧ ಸರ್ಕೀಟ್‌ನಲ್ಲಿ ನಡೆದ ಚೊಚ್ಚಲ ಇಂಡಿಯನ್‌ ಗ್ರ್ಯಾನ್‌ ಪ್ರಿ ಪ್ರಶಸ್ತಿಯು ವೆಟಲ್‌ ಅವರ ಪಾಲಾಗಿತ್ತು. 2013ರಲ್ಲೂ ಅವರು ಟ್ರೋಫಿಗೆ ಮುತ್ತಿಕ್ಕಿದ್ದರು. ಈ ವೇಳೆ ನಡೆದ ಮೋಜಿನ ಪ್ರಸಂಗವೊಂದನ್ನು ವೆಟಲ್‌ ಇತ್ತೀಚೆಗೆ ಮೆಲುಕು ಹಾಕಿದ್ದಾರೆ.

‘ಭಾರತದಲ್ಲಿ ನಾನು ಭಾಗವಹಿಸಿದ ಎಲ್ಲ ರೇಸ್‌ಗಳನ್ನು ಜಯಿಸಿದ್ದೇನೆ. ಅದು ನನಗೆ ಮೆಚ್ಚಿನ ತಾಣವೂ ಹೌದು. 2013ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡ ನಂತರ ನಮ್ಮ ತಂಡದಿಂದ ರಾತ್ರಿ ಸಂತೋಷ ಕೂಟವನ್ನು ಏರ್ಪಡಿಸಲಾಗಿತ್ತು. ಈ ವೇಳೆ ನಾನು ಬಹಳಷ್ಟು ಮದ್ಯ ಸೇವಿಸಿದ್ದರಿಂದ ವಿಪರೀತ ಮತ್ತಿನಲ್ಲಿದ್ದೆ. ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ತೆರಳುವಾಗಲೂ ಅಮಲು ಇಳಿದಿರಲಿಲ್ಲ’ ಎಂದುಫಾರ್ಮುಲಾ ವನ್‌ ತನ್ನ ಟ್ವಿಟರ್‌ ಪೇಜ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಇಂಡಿಯನ್‌ ಗ್ರ್ಯಾನ್‌ ಪ್ರಿ‌ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ವೆಟಲ್‌ ಉತ್ತರಿಸಿದ್ದಾರೆ.

‘ನಾನು ಕುಡಿದಿದ್ದೇನೆ ಎಂದೂ, ರಸ್ತೆ ಮಧ್ಯದಲ್ಲಿ ಆನೆ ನಿಂತಿದೆ ಎಂದೂ ನನಗೆ ಹೇಳಬೇಡ ಎಂದು ಕಾರು ಚಾಲಕನಿಗೆ ಹೇಳಿದೆ. ಇಲ್ಲ, ನಿಜವಾಗಿಯೂ ಅಲ್ಲಿ ಯಾವುದೇ ಆನೆ ಇಲ್ಲ ಎಂದು ಆತ ನುಡಿದ. ರಸ್ತೆಗೆ ಅಡ್ಡಲಾಗಿ ಆನೆಗಳು ಬಂದು ನಿಲ್ಲುವುದು ಭಾರತದಲ್ಲೇ ಹೆಚ್ಚು’ ಎಂದು ಸೆಬಾಸ್ಟಿಯನ್‌ ಮುಖ ಅರಳಿಸಿದರು.

ADVERTISEMENT

ಭಾರತದಲ್ಲಿ 2011ರಿಂದ 2013ರವರೆಗೆ ನಡೆದ ಇಂಡಿಯನ್‌ ಗ್ರ್ಯಾನ್‌ ಪ್ರಿ ರೇಸ್‌ಗಳಲ್ಲಿ ವೆಟಲ್‌ ವಿಜಯಿಯಾಗಿದ್ದರು.

2010, 2011, 2012 ಹಾಗೂ 2013ರಲ್ಲಿ ವೆಟಲ್‌ ವಿಶ್ವ ಚಾಂಪಿಯನ್‌ ಪಟ್ಟ ಧರಿಸಿದ್ದಾರೆ. ಈ ನಾಲ್ಕೂ ಸಂದರ್ಭದಲ್ಲಿ ಅವರು ರೆಡ್‌ಬುಲ್‌ ರೇಸಿಂಗ್‌ ತಂಡದಲ್ಲಿದ್ದರು.

2021ರಲ್ಲಿ ಆ್ಯಸ್ಟನ್‌ ಮಾರ್ಟಿನ್‌ ರೇಸಿಂಗ್‌ ತಂಡದ ಪರ ಸ್ಪರ್ಧಿಸಲುಈ ತಿಂಗಳ ಆರಂಭದಲ್ಲಿ ಅವರು ಒಪ್ಪಂದ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.