ADVERTISEMENT

ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಸೌರಭ್‌

ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌: ಅರ್ಜುನ್‌ ಸಿಂಗ್‌ಗೆ ಕಂಚು

ಪಿಟಿಐ
Published 6 ಸೆಪ್ಟೆಂಬರ್ 2018, 17:16 IST
Last Updated 6 ಸೆಪ್ಟೆಂಬರ್ 2018, 17:16 IST
ಜೂನಿಯರ್‌ ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ (ಎಡದಿಂದ) ಬೆಳ್ಳಿಯ ಪದಕ ಜಯಿಸಿದ ಹೊಜಿನ್‌ ಲಿಮ್‌, ಚಿನ್ನ ಗೆದ್ದ ಸೌರಭ್‌ ಚೌಧರಿ ಮತ್ತು ಕಂಚಿನ ಪದಕ ಜಯಿಸಿದ ಅರ್ಜುನ್‌ ಸಿಂಗ್‌ ಚೀಮಾ ಸಂಭ್ರಮಿಸಿದರು ಐಎಸ್‌ಎಸ್‌ಎಫ್‌ ಚಿತ್ರ
ಜೂನಿಯರ್‌ ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ (ಎಡದಿಂದ) ಬೆಳ್ಳಿಯ ಪದಕ ಜಯಿಸಿದ ಹೊಜಿನ್‌ ಲಿಮ್‌, ಚಿನ್ನ ಗೆದ್ದ ಸೌರಭ್‌ ಚೌಧರಿ ಮತ್ತು ಕಂಚಿನ ಪದಕ ಜಯಿಸಿದ ಅರ್ಜುನ್‌ ಸಿಂಗ್‌ ಚೀಮಾ ಸಂಭ್ರಮಿಸಿದರು ಐಎಸ್‌ಎಸ್‌ಎಫ್‌ ಚಿತ್ರ   

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಭಾರತದ ಉದಯೋನ್ಮುಖ ಶೂಟರ್‌ ಸೌರಭ್‌ ಚೌಧರಿ ಅವರು ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಗುರುವಾರ ನಡೆದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಸೌರಭ್‌ 245.5 ಸ್ಕೋರ್‌ ಕಲೆಹಾಕಿದರು. ಇದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಜೂನ್‌ನಲ್ಲಿ ನಡೆದಿದ್ದ ಜೂನಿಯರ್‌ ವಿಶ್ವಕಪ್‌ನಲ್ಲಿ ಅವರು ದಾಖಲೆ ನಿರ್ಮಿಸಿದ್ದರು.

ಅರ್ಜುನ್‌ ಸಿಂಗ್‌ ಚೀಮಾ ಈ ವಿಭಾಗದ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಅವರು 218 ಸ್ಕೋರ್‌ ಸಂಗ್ರಹಿಸಿದರು. ದಕ್ಷಿಣ ಕೊರಿಯಾದ ಹೊಜಿನ್‌ ಲಿಮ್‌ ಬೆಳ್ಳಿಯ ಪದಕ ಪಡೆದರು. ಅವರು 243.1 ಸ್ಕೋರ್‌ ಗಳಿಸಿದರು.

ADVERTISEMENT

ಅರ್ಹತಾ ಸುತ್ತಿನಲ್ಲಿ 581 ಸ್ಕೋರ್‌ ಗಳಿಸಿದ್ದ ಸೌರಭ್‌, ಮೂರನೆಯವರಾಗಿ ಫೈನಲ್‌ ಪ್ರವೇಶಿಸಿದ್ದರು. 16 ವರ್ಷ ವಯಸ್ಸಿನ ಈ ಶೂಟರ್‌ ಇತ್ತೀಚೆಗೆ ಮುಗಿದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲೂ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು.

ತಂಡ ವಿಭಾಗದಲ್ಲಿ ಬೆಳ್ಳಿ: 10 ಮೀಟರ್ಸ್‌ ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಸೌರಭ್‌, ಅರ್ಜುನ್‌ ಸಿಂಗ್‌ ಮತ್ತು ಅನಮೋಲ್‌ ಅವರು ಬೆಳ್ಳಿಯ ಪದಕ ಜಯಿಸಿದರು.

ಫೈನಲ್‌ನಲ್ಲಿ ಭಾರತ ತಂಡ ಒಟ್ಟು 1730 ಸ್ಕೋರ್‌ ಕಲೆಹಾಕಿತು.

ಈ ವಿಭಾಗದ ಚಿನ್ನ ಮತ್ತು ಕಂಚಿನ ಪದಕಗಳು ಕ್ರಮವಾಗಿ ದಕ್ಷಿಣ ಕೊರಿಯಾ (1732 ಸ್ಕೋರ್‌) ಮತ್ತು ರಷ್ಯಾ (1711 ಸ್ಕೋರ್‌) ತಂಡಗಳ ಪಾಲಾದವು.

ಜೂನಿಯರ್‌ ಬಾಲಕರ ಟ್ರ್ಯಾಪ್‌ ತಂಡ ವಿಭಾಗದಲ್ಲಿ ಭಾರತ ಬೆಳ್ಳಿಯ ಪದಕ ಗೆದ್ದಿತು.

ಅಮನ್‌ ಅಲಿ ಎಲಾಹಿ, ವಿವಾನ್‌ ಕಪೂರ್‌ ಮತ್ತು ಮಾನವಾದಿತ್ಯ ಸಿಂಗ್‌ ರಾಥೋಡ್‌ ಅವರಿದ್ದ ತಂಡ ಫೈನಲ್‌ನಲ್ಲಿ 348 ಸ್ಕೋರ್‌ ಕಲೆಹಾಕಿತು. ಆಸ್ಟ್ರೇಲಿಯಾ ತಂಡ ಈ ವಿಭಾಗದ ಚಿನ್ನದ ಪದಕ ಜಯಿಸಿತು.

ಜೂನಿಯರ್‌ ಟ್ರ್ಯಾಪ್‌ ವೈಯಕ್ತಿಕ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಅಮನ್‌ ಅಲಿ (108 ಸ್ಕೋರ್‌) ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಅಭಿಷೇಕ್‌ಗೆ ಎಂಟನೇ ಸ್ಥಾನ: ಸೀನಿಯರ್‌ ವಿಭಾಗದ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಅಭಿಷೇಕ್‌ ವರ್ಮಾ ಎಂಟನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ಫೈನಲ್‌ನಲ್ಲಿ ಅಭಿಷೇಕ್‌ ಅವರು 118 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ದಕ್ಷಿಣ ಕೊರಿಯಾದ ಜೊಂಗೊಹ್‌ ಮತ್ತು ರಷ್ಯಾದ ಆರ್ಟೆಮ್‌ ಚೆರ್ನೌಸೊವ್‌ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದರು.

10 ಮೀಟರ್ಸ್‌ ಏರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ ಒಲಿಯಿತು. ಅಭಿಷೇಕ್‌, ಓಂ ಪ್ರಕಾಶ್‌ ಮಿಥರ್ವಾಲ್‌ ಮತ್ತು ಶಹಜಾರ್‌ ರಿಜ್ವಿ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ ಒಟ್ಟು 1738 ಸ್ಕೋರ್‌ ಗಳಿಸಿತು.

ಶ್ರೇಯಸಿಗೆ ನಿರಾಸೆ: ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೇಯಸಿ ಸಿಂಗ್‌ 34ನೇ ಸ್ಥಾನ ಗಳಿಸಿದರು. ಅವರು 110 ಸ್ಕೋರ್‌ ಕಲೆಹಾಕಿದರು.

ಸೀಮಾ ತೋಮರ್‌ (108) ಮತ್ತು ವರ್ಷಾ ವರ್ಮನ್‌ (107) ಅವರು ಕ್ರಮವಾಗಿ 41 ಮತ್ತು 42ನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.

ತಂಡ ವಿಭಾಗದಲ್ಲಿ ಭಾರತ ಎಂಟನೇ ಸ್ಥಾನ ಪಡೆಯಿತು. ಸೀಮಾ, ವರ್ಷಾ ಮತ್ತು ಶ್ರೇಯಸಿ ಅವರಿದ್ದ ತಂಡ ಫೈನಲ್‌ನಲ್ಲಿ 325 ಸ್ಕೋರ್‌ ಗಳಿಸಿತು.

ಗುರುವಾರದ ಅಂತ್ಯಕ್ಕೆ ಭಾರತ ಒಟ್ಟು 14 ಪದಕಗಳನ್ನು ಗೆದ್ದು ‍ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರಲ್ಲಿ ನಾಲ್ಕು ಚಿನ್ನ, ಆರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ.

ದಕ್ಷಿಣ ಕೊರಿಯಾ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದು, ರಷ್ಯಾ ನಂತರದ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.