ADVERTISEMENT

ಕುಸ್ತಿಯಲ್ಲಿ ಮಿಂಚುತ್ತಿರುವ ‘ಐಶ್ವರ್ಯಾ’, ಒಲಿಂಪಿಕ್ಸ್‌ಗಾಗಿ ಸಿದ್ಧತೆ

ಪ್ರಸನ್ನ ಕುಲಕರ್ಣಿ
Published 16 ಅಕ್ಟೋಬರ್ 2018, 19:46 IST
Last Updated 16 ಅಕ್ಟೋಬರ್ 2018, 19:46 IST
ಮೈಸೂರಿನಲ್ಲಿ ಅ. 15ರಂದು ನಡೆದ ದಸರಾ ಕುಸ್ತಿ ಪಂದ್ಯದಲ್ಲಿ ಪ್ರಥಮ ಬಹುಮಾನ ಪಡೆದ ಖಾನಾಪುರ ತಾಲ್ಲೂಕು ಚಾಪಗಾವಿಯ ಐಶ್ವರ್ಯಾ
ಮೈಸೂರಿನಲ್ಲಿ ಅ. 15ರಂದು ನಡೆದ ದಸರಾ ಕುಸ್ತಿ ಪಂದ್ಯದಲ್ಲಿ ಪ್ರಥಮ ಬಹುಮಾನ ಪಡೆದ ಖಾನಾಪುರ ತಾಲ್ಲೂಕು ಚಾಪಗಾವಿಯ ಐಶ್ವರ್ಯಾ   

ಖಾನಾಪುರ: ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಅದರಲ್ಲೂ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಅಪರೂಪ. ಇದಕ್ಕೆ ಅಪವಾದ ಎನ್ನುವಂತೆ ತಾಲ್ಲೂಕಿನ ಚಾಪಗಾವಿಯ ಐಶ್ವರ್ಯಾ ದಳವಿ 16ನೇ ವಯಸ್ಸಿನಲ್ಲಿಯೇ ಕುಸ್ತಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಪಾಲ್ಗೊಂಡು ಮಿಂಚುತ್ತಿದ್ದಾರೆ.

ಕುಸ್ತಿ ಪಂದ್ಯದಲ್ಲಿ ಉತ್ತಮ ಸಾಧನೆಗಾಗಿ ರಾಜ್ಯ ಸರ್ಕಾರ ಅವರಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದಾರೆ. ತಾಲ್ಲೂಕಿನ ನಂದಗಡದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಬಿಎ 2ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಅವರ ತಂದೆ ಮಹಾದೇವ ಕೃಷಿಯೊಂದಿಗೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ತಾಯಿ ಗೃಹಿಣಿ. ಸಹೋದರ ಹಾಗೂ ಸಹೋದರಿ ಇದ್ದಾರೆ.

ಹಲವು ಪುರಸ್ಕಾರ:

ADVERTISEMENT

ರಾಜ್ಯಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ, ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಹೈದರಾಬಾದ್ ಹಿಂದ್ ಕೇಸರಿ ಬಿರುದು, ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಸಬ್ ಜೂನಿಯರ್‌ ಕುಸ್ತಿಯಲ್ಲಿ ಕಂಚಿನ ಪದಕ, ಮಹಾರಾಷ್ಟ್ರದ ಔರಂಗಾಬಾದ್ ನಗರದಲ್ಲಿ ನಡೆದ 6ನೇ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ‘ಪೈಕಾ’ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ, ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಪಟ್ಟಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕುಸ್ತಿ ಪಂದ್ಯದಲ್ಲಿ ಬೆಳ್ಳಿಗದೆಯೊಂದಿಗೆ ವೀರರಾಣಿ ಕಿತ್ತೂರು ಚನ್ನಮ್ಮ ಕೇಸರಿ ಪುರಸ್ಕಾರ, ಹಂಪಿ ಉತ್ಸವದಲ್ಲಿ ಹಂಪಿ ಕಿಶೋರಿ ಪುರಸ್ಕಾರ ಸೇರಿದಂತೆ ಇದುವರೆಗೂ ಹಲವಾರು ಬಿರುದುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

‘ಐಶ್ವರ್ಯಾ ನಮ್ಮೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ಶಿಕ್ಷಣ ಇಲಾಖೆ ಆಯೋಜಿಸುತ್ತಿದ್ದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದರು. ಆಕೆಯ ಆಸಕ್ತಿ ಗಮನಿಸಿದ ಶಿಕ್ಷಕ ಮತ್ತು ಕುಸ್ತಿಪಟು ಹಣಮಂತ, 8ನೇ ತರಗತಿಗೆ ಬೆಳಗಾವಿಯ ಕ್ರೀಡಾ ಶಾಲೆಗೆ ಸೇರಿಸಿದರು. ಆಕೆಯ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ, ಎತ್ತರಕ್ಕೆ ಏರುವಂತೆ ಮಾಡುವಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹತ್ತು ಹಲವು ಪಂದ್ಯಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಜಿಲ್ಲೆಗೆ ಕೀರ್ತಿ ತಂದಿದ್ದಾರೆ’ ಎಂದು ಗ್ರಾಮದ ಪಿರಾಜಿ ಕುರಾಡೆ ತಿಳಿಸಿದರು.

ಸಿದ್ಧತೆ ಮಾಡುತ್ತಿದ್ದೇನೆ

ರಾಯಬಾಗ ತಾಲ್ಲೂಕು ಕುಡಚಿಯಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಂದ್ಯದಲ್ಲಿ ಜಯ ಗಳಿಸಿದ್ದಾರೆ. ಅ. 15ರಂದು ಮೈಸೂರಿನಲ್ಲಿ ನಡೆದ 74 ಕೆ.ಜಿ. ವಿಭಾಗದ ದಸರಾ ಕುಸ್ತಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದು ಹೆಮ್ಮೆಯ ವಿಷಯ’ ಎಂದು ತಂದೆ ಮಹಾದೇವ ಹೆಮ್ಮೆಯಿಂದ ಹೇಳಿದರು.

‘ಕುಸ್ತಿಯಲ್ಲಿ ಇದುವರೆಗೆ ನಾನು ಮಾಡಿರುವ ಸಾಧನೆ ಅಲ್ಪ ಮಾತ್ರ. ಪೋಷಕರು, ಗುರುಗಳಾದ ನಾಗರಾಜ್ ಮತ್ತು ಹಣಮಂತ ಇದಕ್ಕೆ ಕಾರಣ. ಉನ್ನತ ಸಾಧನೆಗಾಗಿ ಸಿದ್ಧತೆಯಲ್ಲಿ ತೊಡಗಿದ್ದೇನೆ’ ಎಂದು ಐಶ್ವರ್ಯಾ ತಮ್ಮ ಕನಸು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.