ಒಡೆನ್ಸ್: ಭಾರತದ ಯುವ ಆಟಗಾರ ಆಯುಷ್ ಶೆಟ್ಟಿ ಅವರು ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯ ಮೊದಲ ಸುತ್ತಿನಲ್ಲಿ ಮಂಗಳವಾರ ಫ್ರಾನ್ಸ್‌ನ ಟೊಮಾ ಜೂನಿಯರ್ ಪೊಪೊವ್ ಅವರಿಗೆ ಮಣಿಯುವ ಮುನ್ನ ತೀವ್ರ ಹೋರಾಟ ತೋರಿದರು.
ಭಾರತದ ಇತರ ಆಟಗಾರರೂ ಬೇಗನೇ ಹೊರಬಿದ್ದರು.
ಫ್ರೆಂಚ್ ತಾರೆ ಟೊಮಾ ಅವರು ಒಂದು ಗಂಟೆ 17 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 21–19, 17–21, 21–15 ರಿಂದ ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನದಲ್ಲಿರುವ ಆಯುಷ್ ಅವರನ್ನು ಸೋಲಿಸಿದರು. ಇದು 20 ವರ್ಷ ವಯಸ್ಸಿನ ಆಯುಷ್‌ಗೆ, ಟೋಮಾ ಎದುರು ಸತತ ಎರಡನೇ ಸೋಲು. ಮೇ ತಿಂಗಳಲ್ಲಿ ಮಲೇಷ್ಯಾ ಓಪನ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಆಯುಷ್ ಇದೇ ಎದುರಾಳಿಗೆ ಮಣಿದಿದ್ದರು.
ಮಹಿಳೆಯರ ವಿಭಾಗದಲ್ಲಿ ಅನ್ಮೋಲ್ ಖಾರ್ಬ್ 9–21, 14–21ರಲ್ಲಿ ಏಳನೇ ಶ್ರೇಯಾಂಕದ ಪುತ್ರಿ ಕುಸುಮ ವಾರ್ಧನಿ (ಇಂಡೊನೇಷ್ಯಾ) ಅವರಿಗೆ 34 ನಿಮಿಷಗಳಲ್ಲಿ ಮಣಿದರು.
ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್ ಮತ್ತು ಸಾಯಿ ಪ್ರತೀಕ್ ಕೆ. ಜೋಡಿ, ಮಹಿಳೆಯರ ಡಬಲ್ಸ್‌ನಲ್ಲಿ ಕವಿಪ್ರಿಯಾ ಸೆಲ್ವಂ ಮತ್ತು ಸಿಮ್ರನ್ ಸಿಂಘಿ ಜೋಡಿ ನೇರ ಗೇಮ್‌ಗಳಲ್ಲಿ ಎದುರಾಳಿಗಳಿಗೆ ಮಣಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.