ADVERTISEMENT

ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌: ಕೂಟ ದಾಖಲೆ ಬರೆದ ಶಿವಾ

ರಾಜ್ಯದ ಫ್ರೀಸ್ಟೈಲ್ ಪುರುಷರ ತಂಡಕ್ಕೆ ಚಿನ್ನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 15:47 IST
Last Updated 6 ಸೆಪ್ಟೆಂಬರ್ 2022, 15:47 IST
ಶಿವ ಎಸ್‌.
ಶಿವ ಎಸ್‌.   

‌ಬೆಂಗಳೂರು: ಕರ್ನಾಟಕದ ಎಸ್‌.ಶಿವಾ ಅವರು ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಗುವಾಹಟಿಯಡಾ. ಜಾಕೀರ್ ಹುಸೇನ್‌ ಈಜು ಸಂಕೀರ್ಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೊದಲ ದಿನ ಶಿವಾ ಅವರು ಪುರುಷರ 200 ಮೀಟರ್ಸ್ ಮೆಡ್ಲೆಯಲ್ಲಿ ಅಗ್ರಸ್ಥಾನ ಗಳಿಸಿದರು. 2 ನಿಮಿಷ 5.64 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು, 2018ರಲ್ಲಿ ಸಜನ್‌ ಪ್ರಕಾಶ್‌ ತಿರುವನಂತಪುರದಲ್ಲಿ ನಿರ್ಮಿಸಿದ್ದ ದಾಖಲೆಯನ್ನು (2 ನಿ. 5.83 ಸೆ.) ಮೀರಿದರು.

ಶಿವಾ, ಶಿವಾಂಕ್ ವಿಶ್ವನಾಥ್‌, ಧ್ಯಾನ್‌ ಬಾಲಕೃಷ್ಣ ಮತ್ತು ಪೃಥ್ವಿ ಎಂ. ಅವರನ್ನೊಳಗೊಂಡ ರಾಜ್ಯ ತಂಡವು ಪುರುಷರ 4X200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. ಕರ್ನಾಟಕದ ಈಜುಪಟುಗಳು 7 ನಿಮಿಷ 54.39 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ADVERTISEMENT

ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಕರ್ನಾಟಕದ ಮಾನವಿ ವರ್ಮಾ ಮತ್ತು ಉತ್ತರ ಪ್ರದೇಶದ ದಿಶಾ ಭಂಡಾರಿ ಜಂಟಿಯಾಗಿ ಚಿನ್ನ ಜಯಿಸಿದರು. ಇಬ್ಬರೂ 2 ನಿ. 27.28 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ಶಿವಾಂಕ್‌ ವಿಶ್ವನಾಥ್‌ (4 ನಿ. 9.02 ಸೆ.) ಬೆಳ್ಳಿ ಜಯಿಸಿದರೆ, ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿಹಿತಾ ನಯನಾ (34.77 ಸೆ.) ಮತ್ತು ಮಾನವಿ (34.77 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

4X50 ಮೀ. ಮೆಡ್ಲೆ ಮಿಶ್ರ ತಂಡ ವಿಭಾಗದಲ್ಲಿ ಶಿವಾ, ಪೃಥ್ವಿಕ್ ಡಿ.ಎಸ್‌, ತನಿಶಿ ಗುಪ್ತಾ ಮತ್ತು ಲಿಥೇಶಾ ಮಂದಣ್ಣ ಅವರಿದ್ದ ತಂಡವು ಕಂಚು ಗೆದ್ದಿತು. ತಂಡವು 1 ನಿ. 54.64 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.