ADVERTISEMENT

ಇಂದಿನಿಂದ ಶೂಟರ್‌ಗಳ ಅಭ್ಯಾಸ

ಪಿಟಿಐ
Published 7 ಜುಲೈ 2020, 16:18 IST
Last Updated 7 ಜುಲೈ 2020, 16:18 IST
ಶೂಟಿಂಗ್
ಶೂಟಿಂಗ್    

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ರಹದಾರಿ ಪಡೆದಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಶೂಟರ್‌ಗಳು ಬುಧವಾರದಿಂದ ತಾಲೀಮು ನಡೆಸಲಿದ್ದಾರೆ.

‘ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯತ್ತ ಚಿತ್ತ ನೆಟ್ಟಿರುವ ಶೂಟರ್‌ಗಳಿಗೆ ಯಾವುದೇ ತೊಂದರೆಯಾಗಬಾರದು. ಇದನ್ನು ಗಮನದಲ್ಲಿಟ್ಟುಕೊಂಡುನವದೆಹಲಿಯಲ್ಲಿರುವ ಕರ್ಣಿ ಸಿಂಗ್‌ ಶೂಟಿಂಗ್ ರೇಂಜ್ ಅನ್ನು‌ ಬುಧವಾರದಿಂದ ಅಭ್ಯಾಸಕ್ಕೆ ಮುಕ್ತಗೊಳಿಸುತ್ತಿದ್ದೇವೆ’ ಎಂದುಭಾರತೀಯ ಕ್ರೀಡಾ ಪ್ರಾಧಿಕಾರವು (ಸಾಯ್‌) ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ತರಬೇತಿಯಲ್ಲಿ ಪಾಲ್ಗೊಳ್ಳುವವರು ಕೇಂದ್ರ ಸರ್ಕಾರ ಹಾಗೂ ಸಾಯ್‌ ಸಮಿತಿ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ. ಅಂತರ ನಿಯಮವನ್ನು ಮರೆಯುವಂತೆಯೇ ಇಲ್ಲ’ ಎಂದು ಸಾಯ್ ಹೇಳಿದೆ.‌

ADVERTISEMENT

‘ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಜೊತೆಗೆ ಯಾವ ಸಮಯದಲ್ಲಿ ಅಭ್ಯಾಸಕ್ಕೆ ಹಾಜರಾಗುತ್ತಾರೆ ಎಂಬುದರ ಮಾಹಿತಿಯನ್ನೂ ಒದಗಿಸಬೇಕು. ಶೂಟಿಂಗ್‌ ರೇಂಜ್‌ ಪ್ರವೇಶಿಸುವ ಮುನ್ನ ಎಲ್ಲರೂ ದೇಹದ ಉಷ್ಣಾಂಶ ಪರೀಕ್ಷೆಗೆ ಒಳಪಡಬೇಕು. ಜೊತೆಗೆ ಆರೋಗ್ಯ ಸೇತು ಆ್ಯಪ್‌ ಕೂಡ ಡೌನ್‌ಲೋಡ್‌‌ ಮಾಡಿಕೊಂಡಿರಬೇಕು. ರೇಂಜ್‌ನ ಪ್ರವೇಶ ದ್ವಾರದ ಬಳಿ ಇರುವ ಸಿಬ್ಬಂದಿ ಕೇಳಿದಾಗ ಅದನ್ನು ತೋರಿಸಬೇಕು’ ಎಂದೂ ತಿಳಿಸಿದೆ.

‘ಶೂಟರ್‌ಗಳು ಗನ್‌, ಪಿಸ್ತೂಲ್‌, ಸ್ಪೋರ್ಟ್ಸ್‌ ಜಾಕೆಟ್‌, ಶೂ, ಕನ್ನಡಕ ಸೇರಿದಂತೆ ತಮ್ಮ ವೈಯಕ್ತಿಕ ಸಲಕರಣೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಎಲ್ಲರೂ ಮನೆಯಿಂದಲೇ ಸ್ಯಾನಿಟೈಸರ್‌, ವಾಟರ್‌ ಬಾಟಲ್‌, ಟವೆಲ್‌ ಹಾಗೂ ಕೈಗವಸುಗಳನ್ನು ತರಬೇಕು’ ಎಂದೂ ಹೇಳಲಾಗಿದೆ.

ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ಇತ್ತೀಚೆಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ 34 ಮಂದಿ ಸಂಭಾವ್ಯ ಶೂಟರ್‌ಗಳ ಪಟ್ಟಿಯನ್ನು ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.