ADVERTISEMENT

ಆಗಸ್ಟ್‌ 1ರಿಂದ ಶೂಟಿಂಗ್‌ ಶಿಬಿರ: ಹಾಜರಾತಿ ಕಡ್ಡಾಯ

ಪಿಟಿಐ
Published 16 ಜುಲೈ 2020, 10:28 IST
Last Updated 16 ಜುಲೈ 2020, 10:28 IST
ನವದೆಹಲಿಯಲ್ಲಿರುವ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ –ಸಂಗ್ರಹ ಚಿತ್ರ 
ನವದೆಹಲಿಯಲ್ಲಿರುವ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ –ಸಂಗ್ರಹ ಚಿತ್ರ    

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ‌ ಪ್ರಕಟಿಸಲಾಗಿರುವ 34 ಸದಸ್ಯರ ಸಂಭಾವ್ಯ ಶೂಟಿಂಗ್‌ ತಂಡವು ಆಗಸ್ಟ್‌ 1ರಿಂದ ಅಭ್ಯಾಸ ಆರಂಭಿಸಲಿದೆ.

ನವದೆಹಲಿಯ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆಯುವ ಈ ಶಿಬಿರದಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ಗುರುವಾರ ಸೂಚಿಸಿದೆ.

ಶಿಬಿರದ ವೇಳೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿರುವಎನ್‌ಆರ್‌ಎಐ, ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬದ್ಧವಾಗಿರುವುದಾಗಿಯೂ ಹೇಳಿದೆ. ಇದಕ್ಕಾಗಿ ಹಿರಿಯ ಶೂಟರ್‌ ರೋನಕ್‌ ಪಂಡಿತ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ. ರೋನಕ್‌ ಅವರು ಎನ್‌ಆರ್‌ಎಐನ ಹೈಪರ್ಫಾರ್ಮೆನ್ಸ್‌ ಮ್ಯಾನೇಜರ್‌ ಕೂಡ ಆಗಿದ್ದಾರೆ.

ADVERTISEMENT

‘ಶೂಟರ್‌ಗಳು ಹಾಗೂ ಕೋಚ್‌ಗಳ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಹಂತ ಹಂತವಾಗಿ ರಾಷ್ಟ್ರೀಯ ಶಿಬಿರಗಳನ್ನು ಪುನರಾರಂಭಿಸಲು ನಾವು ಸಿದ್ಧರಾಗಿದ್ದೇವೆ. ಕೊರೊನಾ ಸೋಂಕಿನ ಪಸರಿಸುವಿಕೆಯನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೇವೆ’ ಎಂದುಎನ್‌ಆರ್‌ಎಐ ಅಧ್ಯಕ್ಷ ರಣಿಂದರ್‌ ಸಿಂಗ್‌ ತಿಳಿಸಿದ್ದಾರೆ.

ಕರ್ಣಿ ಸಿಂಗ್‌ ರೇಂಜ್‌ನ ಸಮೀಪವಿರುವ ಮಾನವ್‌ ರಚನಾ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ನ (ಐಎಸ್‌ಎಸ್‌ಎಫ್‌) ತರಬೇತಿ ಅಕಾಡೆಮಿ ಇದೆ. ಅಲ್ಲಿಶೂಟರ್‌ಗಳು ಹಾಗೂ ಕೋಚ್‌ಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಪಸ್‌ನಿಂದ ಶೂಟಿಂಗ್‌ ರೇಂಜ್‌ಗೆ ಪ್ರಯಾಣಿಸಲು ಸಾರಿಗೆ ವ್ಯವಸ್ಥೆಯೂ ಇರಲಿದೆ.

ಶೂಟರ್‌ಗಳು, ಕೋಚ್‌ಗಳು ಹಾಗೂ ನೆರವು ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಳ್ಳುವ ಮುನ್ನ ಕೋವಿಡ್‌ ಪರೀಕ್ಷೆಯ ವರದಿಯನ್ನುಎನ್‌ಆರ್‌ಎಐಗೆ ಸಲ್ಲಿಸಬೇಕು.

ತರಬೇತಿಯ ಗುಣಮಟ್ಟದ ಮೇಲೆ ನಿಗಾ ಇಡಲು ಎನ್‌ಆರ್‌ಎಐ ವಿಶೇಷ ಮಾರ್ಗಸೂಚಿಗಳನ್ನು ರಚಿಸಿದೆ.ಶಿಬಿರ ಆರಂಭವಾಗುವ ಒಂದು ವಾರ ಮುಂಚೆ ಅದನ್ನು ಪ್ರಕಟಿಸಲಿದೆ. ಶಿಬಿರದ ವೇಳೆ ಎಲ್ಲರೂ ಎನ್‌ಆರ್‌ಎಐ, ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯ.

ಭಾರತದ 15 ಶೂಟರ್‌ಗಳು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಕೂಟವನ್ನು ಕೋವಿಡ್‌ ಬಿಕ್ಕಟ್ಟಿನಿಂದಾಗಿ 2021ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.