ಕಂಚಿನ ಪದಕದೊಂದಿಗೆ ಮೇಘನಾ ಸಜ್ಜನರ್
–ಎಕ್ಸ್ ಚಿತ್ರ
ನಿಂಗ್ಬೊ (ಚೀನಾ): ಅನುಭವಿ ಶೂಟರ್ ಮೇಘನಾ ಸಜ್ಜನರ್ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ರೈಫಲ್/ ಪಿಸ್ತೂಲ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದರು. ಭಾನುವಾರ ಮುಕ್ತಾಯವಾದ ಋತುವಿನ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕರ್ನಾಟಕದ ಮೇಘನಾ 230.0 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ವಿಶ್ವಕಪ್‌ನಲ್ಲಿ ಅವರಿಗೆ ದೊರೆತ ಚೊಚ್ಚಲ ಪದಕ ಇದಾಗಿದೆ.
ಚೀನಾದ ಉದಯೋನ್ಮುಖ ತಾರೆ ಪೆಂಗ್ ಕ್ಸಿನ್ಲು 255.3 ಅಂಕ ಸಂಪಾದಿಸಿ, ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಅವರು ತಮ್ಮದೇ ದೇಶದ ವಾಂಗ್ ಜಿಫೀ (254.8) ಅವರ ದಾಖಲೆಯನ್ನು ಮುರಿದರು. ನಾರ್ವೆಯ ಜೀನೆಟ್ ಹೆಗ್ ಡ್ಯುಸ್ಟಾಡ್ ಬೆಳ್ಳಿ ಪದಕ ಗೆದ್ದರು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಶನಿವಾರ ಇಶಾ ಸಿಂಗ್ ಅವರು ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು.
ಪದಕ ಪಟ್ಟಿಯಲ್ಲಿ ಚೀನಾ (3 ಚಿನ್ನ, 4 ಬೆಳ್ಳಿ, 1 ಕಂಚು) ಅಗ್ರಸ್ಥಾನ ಪಡೆದರೆ, ನಾರ್ವೆ (2 ಚಿನ್ನ, 1 ಬೆಳ್ಳಿ, 1 ಕಂಚು) ಎರಡನೇ ಸ್ಥಾನ ಗಳಿಸಿತು. ಎರಡು ಪದಕ ಗೆದ್ದ ಭಾರತ (1 ಚಿನ್ನ, 1 ಕಂಚು) ಐದನೇ ಸ್ಥಾನ ಪಡೆಯಿತು.
31 ವರ್ಷದ ಮೇಘನಾ (632.7) ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಪೆಂಗ್ (637.4) ಅಗ್ರಸ್ಥಾನ ಪಡೆದಿದ್ದರು.
ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಅರ್ಹತಾ ಸುತ್ತಿನಲ್ಲಿ ಕಿರಣ್ ಅಂಕುಶ್ ಜಾಧವ್ (590 ಅಂಕ) ನಾಲ್ಕನೇ ಸ್ಥಾನದೊಂದಿಗೆ ಫೈನಲ್ ತಲುಪಿದ್ದರು. ಪ್ರಶಸ್ತಿ ಸುತ್ತಿನಲ್ಲೂ ನಾಲ್ಕನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.