ADVERTISEMENT

ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಸಿಂಗಲ್ಸ್‌ನಲ್ಲಿ ಸಿಂಧು ಸವಾಲು ಅಂತ್ಯ

ಡಬಲ್ಸ್‌, ಮಿಶ್ರ ಡಬಲ್ಸ್‌ಗಳಲ್ಲಿ ಸಾತ್ವಿಕ್‌ಗೆ ನಿರಾಸೆ

ಪಿಟಿಐ
Published 19 ಸೆಪ್ಟೆಂಬರ್ 2019, 19:31 IST
Last Updated 19 ಸೆಪ್ಟೆಂಬರ್ 2019, 19:31 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಚಾಂಗ್‌ಜೌ, ಚೀನಾ: ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದ ಪಿ.ವಿ.ಸಿಂಧುಗೆ ಗುರುವಾರ ನಿರಾಸೆ ಕಾಡಿತು.

ಒಲಿಂಪಿಕ್‌ ಸ್ಪೋರ್ಟ್ಸ್‌ ಸೆಂಟರ್‌ನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು ಎಡವಿದರು.

ಥಾಯ್ಲೆಂಡ್‌ನ ಪೊರ್ನ್‌ಪವೀ ಚೊಚುವೊಂಗ್‌ 12–21, 21–13, 21–19ರಿಂದ ಗೆದ್ದು ಎಂಟರ ಘಟ್ಟಕ್ಕೆ ಮುನ್ನಡೆದರು. ಈ ಹೋರಾಟ 58 ನಿಮಿಷ ನಡೆಯಿತು.

ADVERTISEMENT

ಹೋದ ತಿಂಗಳು ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ಬರೆದಿದ್ದ ಸಿಂಧು, ಮೊದಲ ಗೇಮ್‌ನಲ್ಲಿ ದಿಟ್ಟ ಆಟ ಆಡಿದರು. ಪೊರ್ನ್‌ಪವೀ ವಿರುದ್ಧ 3–0 ಗೆಲುವಿನ ದಾಖಲೆ ಹೊಂದಿದ್ದ ಭಾರತದ ಆಟಗಾರ್ತಿ, ಚುರುಕಿನ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ 7–1 ಮುನ್ನಡೆ ಪಡೆದರು. ಈ ಹಂತದಲ್ಲಿ ಲಯ ಕಂಡುಕೊಂಡ ಥಾಯ್ಲೆಂಡ್‌ ಆಟಗಾರ್ತಿ ಸತತವಾಗಿ ಪಾಯಿಂಟ್ಸ್‌ ಗಳಿಸಿ ಹಿನ್ನಡೆಯನ್ನು 10–11ಕ್ಕೆ ತಗ್ಗಿಸಿಕೊಂಡರು.

ದ್ವಿತೀಯಾರ್ಧದಲ್ಲಿ ಮತ್ತೆ ಪ್ರಾಬಲ್ಯ ಮೆರೆದ ಸಿಂಧು, ಸತತ ಎಂಟು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಂಡರು. ಹೀಗಾಗಿ ಮುನ್ನಡೆ 19–10ಕ್ಕೆ ಏರಿತು. ಬಳಿಕವೂ ಗುಣಮಟ್ಟದ ಸಾಮರ್ಥ್ಯ ತೋರಿ ಗೇಮ್‌ ಕೈವಶ ಮಾಡಿಕೊಂಡರು.

ಎರಡನೇ ಗೇಮ್‌ನ ಶುರುವಿನಿಂದಲೇ ಪರಿಣಾಮಕಾರಿ ಯಾಗಿ ಆಡಿದ ಪೊರ್ನ್‌ಪವೀ 5–1 ಮುನ್ನಡೆ ಗಳಿಸಿದರು. ನಂತರವೂ ಚುರುಕಿನ ಸಾಮರ್ಥ್ಯ ತೋರಿದ ಅವರು ಮುನ್ನಡೆಯನ್ನು 15–7ಕ್ಕೆ ಹೆಚ್ಚಿಸಿಕೊಂಡು ಗೇಮ್‌ ಮೇಲಿನ ಹಿಡಿತ ಬಿಗಿಮಾಡಿಕೊಂಡರು. ಈ ಹಂತದಲ್ಲಿ ಚುರುಕಿನ ಆಟ ಆಡಿದ ಸಿಂಧು ತಿರುಗೇಟು ನೀಡುವ ಮುನ್ಸೂಚನೆ ನೀಡಿದ್ದರು. ಆದರೆ ಥಾಯ್ಲೆಂಡ್‌ ಆಟಗಾರ್ತಿ ಇದಕ್ಕೆ ಆಸ್ಪದ ನೀಡಲಿಲ್ಲ.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿನಿಂದ ಸೆಣಸಿದರು. ಹೀಗಾಗಿ 6–6 ಸಮಬಲ ಕಂಡುಬಂತು. ನಂತರ ಮೇಲುಗೈ ಸಾಧಿಸಿದ ಸಿಂಧು, 11–7ರಿಂದ ಮುನ್ನಡೆ ಪಡೆದರು. ನಂತರವೂ ಚುರುಕಾಗಿ ಆಡಿ ಮುನ್ನಡೆಯನ್ನು 19–15ಕ್ಕೆ ಹೆಚ್ಚಿಸಿಕೊಂಡರು. ಇದರಿಂದ ಕಿಂಚಿತ್ತೂ ಎದೆಗುಂದದ ಪೊರ್ನ್‌ಪವೀ ಛಲದಿಂದ ಹೋರಾಡಿದರು. ಸತತ ಆರು ಪಾಯಿಂಟ್ಸ್‌ ಗಳಿಸಿ ಖುಷಿಯ ಕಡಲಲ್ಲಿ ತೇಲಿದರು.

ಸಾತ್ವಿಕ್‌ಗೆ ನಿರಾಸೆ: ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ನಿರಾಸೆ ಕಂಡರು.

ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಶೆಟ್ಟಿ 19–21, 8–21ರಲ್ಲಿ ಜಪಾನ್‌ನ ತಕೇಶಿ ಕಮುರಾ ಮತ್ತು ಕೀಗೊ ಸೊನೊಡಾ ಎದುರು ಸೋತರು.

ಮಿಶ್ರ ಡಬಲ್ಸ್‌ನ ಎರಡನೇ ಸುತ್ತಿನ ಪೈಪೋಟಿಯಲ್ಲಿ ಸಾತ್ವಿಕ್‌ ಮತ್ತು ಅಶ್ವಿನಿ ಪೊನ್ನಪ್ಪ 11–21, 21–16, 12–21ರಲ್ಲಿ ಜಪಾನ್‌ನ ಯೂಕಿ ಕನೆಕೊ ಮತ್ತು ಮಿಸಾಕಿ ಮತ್ಸುತೊಮೊ ಎದುರು ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.