ADVERTISEMENT

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ನೀಗುವುದೇ ಸಿಂಧು ಪ್ರಶಸ್ತಿ ಬರ?

ಪಿಟಿಐ
Published 29 ಜುಲೈ 2019, 19:30 IST
Last Updated 29 ಜುಲೈ 2019, 19:30 IST
ಪಿ.ವಿ.ಸಿಂಧು–ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು–ಎಎಫ್‌ಪಿ ಚಿತ್ರ   

ಬ್ಯಾಂಕಾಕ್‌: ಈ ಋತುವಿನ ಮೊದಲ ಪ್ರಶಸ್ತಿ ಹುಡುಕಾಟದಲ್ಲಿರುವ ಭಾರತದ ಪಿ.ವಿ.ಸಿಂಧು ಮಂಗಳವಾರ ಆರಂಭವಾಗುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಇಂಡೊನೇಷ್ಯಾ ಹಾಗೂ ಜಪಾನ್‌ ಓಪನ್‌ ಟೂರ್ನಿಗಳಲ್ಲಿ ಅವರಿಗೆ ಸೋಲಿನ ಆಘಾತ ಎದುರಾಗಿತ್ತು.

ಇಂಡೊನೇಷ್ಯಾ ಟೂರ್ನಿಯ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರು ಸಿಂಧು ಸೋತಿದ್ದರು. ಜಪಾನ್‌ ಓಪನ್‌ನ ಕ್ವಾರ್ಟರ್‌ಫೈನಲ್‌ ಹಂತದಲ್ಲಿ ಇದೇ ಆಟಗಾರ್ತಿಗೆ ಮಣಿದಿದ್ದರು.

ಥಾಯ್ಲೆಂಡ್‌ ಓಪನ್‌ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಭಾರತದ ಆಟಗಾರ್ತಿ ಮೊದಲ ಸುತ್ತಿನಲ್ಲಿ ಚೀನಾದ ಹಾನ್‌ ಯುಯ್‌ ಎದುರು ಸೆಣಸಲಿರುವರು.

ADVERTISEMENT

ಭಾರತದ ಮತ್ತೊಬ್ಬರು ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್‌ ಕೂಡ ಟೂರ್ನಿಯಲ್ಲಿ ಕಾಣಿಕೊಳ್ಳಲಿರುವರು. ಗಾಯದ ಕಾರಣ ಇಂಡೊನೇಷ್ಯಾ ಹಾಗೂ ಜಪಾನ್‌ ಓಪನ್‌ನಲ್ಲಿ ಅವರು ಆಡಿರಲಿಲ್ಲ.

ಪುರುಷರ ಸಿಂಗಲ್ಸ್‌ನಲ್ಲಿ ಶುಭಂಕರ್‌ ಡೇ ಪ್ರಥಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ ಆಟಗಾರ ಕೆಂಟೊ ಮೊಮೊಟಾ ಅವರನ್ನು ಎದುರಿಸುವರು. ಬಿ.ಸಾಯಿ ಪ್ರಣೀತ್‌ ಥಾಯ್ಲೆಂಡ್‌ನ ಕಾಂಟಾಫೊನ್‌ ವಾಂಗ್‌ಚರೊನ್‌ ವಿರುದ್ಧ ಸೆಣಸುವರು. ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಸಮೀರ್‌ ವರ್ಮಾ, ಪರುಪಳ್ಳಿ ಕಶ್ಯಪ್‌, ಸೌರಭ್‌ ವರ್ಮಾ ಮತ್ತು ಅಜಯ್‌ ಜಯರಾಮ್‌ ಸಿಂಗಲ್ಸ್ ವಿಭಾಗದಲ್ಲಿ ಆಡಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿ ರೆಡ್ಡಿ–ಚಿರಾಗ್‌ ಶೆಟ್ಟಿ, ಮನು ಅತ್ರಿ–ಬಿ.ಸುಮಿತ್‌ ರೆಡ್ಡಿ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ–ಎನ್‌. ಸಿಕ್ಕಿರೆಡ್ಡಿ ಅಖಾಡಕ್ಕಿಳಿಯಲಿರುವರು. ಪ್ರಣವ್‌ ಜೆರಿ ಚೋಪ್ರಾ–ಎನ್‌.ಸಿಕ್ಕಿರೆಡ್ಡಿ, ಸಾತ್ವಿಕ್‌ ಸಾಯಿರಾಜ್‌– ಅಶ್ವಿನಿ ಪೊನ್ನಪ್ಪ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.