ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಲಕ್ಷ್ಯ ಜಯದ ಆರಂಭ

ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ

ಪಿಟಿಐ
Published 16 ನವೆಂಬರ್ 2021, 11:30 IST
Last Updated 16 ನವೆಂಬರ್ 2021, 11:30 IST
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ
ಪಿ.ವಿ.ಸಿಂಧು– ಎಎಫ್‌ಪಿ ಚಿತ್ರ   

ಬಾಲಿ, ಇಂಡೊನೇಷ್ಯಾ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, ಭಾರತದ ಪಿ.ವಿ.ಸಿಂಧು ಹಾಗೂ ಉತ್ತಮ ಲಯದಲ್ಲಿರುವ ಲಕ್ಷ್ಯ ಸೇನ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ಇಲ್ಲಿ ಆರಂಭವಾದ ಟೂರ್ನಿಯಲ್ಲಿ ಇವರಿಬ್ಬರು ಎರಡನೇ ಸುತ್ತು ಪ್ರವೇಶಿಸಿದರು. ವಿಶ್ವ ಚಾಂಪಿಯನ್ ಸಿಂಧು ಅವರು ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ 21–15, 21–19ರಿಂದ ಥಾಯ್ಲೆಂಡ್‌ನ ಸುಪನಿದಾ ಕೇಟ್‌ಥೊಂಗ್ ಸವಾಲು ಮೀರಿದರು. ಕೇವಲ 43 ನಿಮಿಷಗಳಲ್ಲಿ ಅವರು ಜಯ ಒಲಿಸಿಕೊಂಡರು.

ಮೊದಲ ಗೇಮ್‌ನಲ್ಲಿ ವಿರಾಮದ ವೇಳೆ 11–5ರಿಂದ ಮುನ್ನಡೆ ಗಳಿಸಿದ್ದ ಸಿಂಧು ಆ ಬಳಿಕವೂ ಮುನ್ನಡೆ ಬಿಟ್ಟುಕೊಡಲಿಲ್ಲ. ಆದರೆ ಎರಡನೇ ಗೇಮ್‌ನಲ್ಲಿ ಸುಪನಿದಾ ಸ್ವಲ್ಪ ಪ್ರತಿರೋಧ ತೋರಿದರು. ವಿರಾಮದ ವೇಳೆ ಸಿಂಧು 11–8ರಿಂದ ಮುನ್ನಡೆಯಲ್ಲಿದ್ದರು. ಆದರೆ ಒಂದು ಹಂತದಲ್ಲಿ 18–19ರಿಂದ ಥಾಯ್ಲೆಂಡ್‌ ಆಟಗಾರ್ತಿ ಸಿಂಧುವನ್ನು ಸಮೀಪಿಸಿದ್ದರು. ಬಳಿಕ ಸತತ ಎರಡು ಮ್ಯಾಚ್‌ ಪಾಯಿಂಟ್ಸ್ ಗಳಿಸಿದ ವಿಶ್ವ ಚಾಂಪಿಯನ್ ಆಟಗಾರ್ತಿಯು ಪಂದ್ಯ ಗೆದ್ದು ಬೀಗಿದರು.

ADVERTISEMENT

ಭಾರತದ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಕ್ಲಾರಾ ಅಜುರ್‌ಮೆಂಡಿ ಎದುರು ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಲಕ್ಷ್ಯ ವಿಶ್ವದ 10ನೇ ರ‍್ಯಾಂಕಿನ ಆಟಗಾರ, ಜಪಾನ್‌ನ ಕಂಟಾ ಸುನೆಯಮಾ ಅವರನ್ನು ಮಣಿಸಿದರು. ಹೈಲೊ ಓಪನ್‌ ಸೆಮಿಫೈನಲ್‌ ಹಾಗೂ ಡಚ್‌ ಓಪನ್‌ನಲ್ಲಿ ಫೈನಲ್ ತಲುಪಿದ್ದ ಭಾರತದ ಆಟಗಾರನಿಗೆ 21-17, 18-21, 21-17ರಿಂದ ಜಯ ಒಲಿಯಿತು. ಈ ಜಿದ್ದಾಜಿದ್ದಿನ ಪೈಪೋಟಿಯು ಒಂದು ತಾಸು ಎಂಟು ನಿಮಿಷಗಳ ಕಾಲ ನಡೆಯಿತು.

ಲಕ್ಷ್ಯ ಅವರಿಗೆ ಮುಂದಿನ ಸುತ್ತಿನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌, ಅಗ್ರಶ್ರೇಯಾಂಕದ ಜಪಾನ್‌ ಆಟಗಾರ ಕೆಂಟೊ ಮೊಮೊಟಾ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.