ADVERTISEMENT

ತೈ ಜುಗೆ ಮಣಿದ ಸಿಂಧು

ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್‌ ಟೂರ್ನಿ

ಪಿಟಿಐ
Published 8 ಜುಲೈ 2022, 12:57 IST
Last Updated 8 ಜುಲೈ 2022, 12:57 IST
ಪಿ.ವಿ.ಸಿಂಧು– ಪಿಟಿಐ ಚಿತ್ರ
ಪಿ.ವಿ.ಸಿಂಧು– ಪಿಟಿಐ ಚಿತ್ರ   

ಕ್ವಾಲಾಲಂಪುರ: ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಪ್ರಶಸ್ತಿ ಗೆಲುವಿನ ಆಸೆ ಈಡೇರಲಿಲ್ಲ. ಮಹಿಳಾ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಅವರಿಗೆ ಚೀನಾ ತೈಪೆಯ ತೈ ಜು ಯಿಂಗ್‌ ಎದುರು ಗೆಲುವು ಒಲಿಯಲಿಲ್ಲ.

ವಾರದ ಹಿಂದೆ ಮಲೇಷ್ಯಾ ಓಪನ್ ಟೂರ್ನಿಯಲ್ಲಿ ತೈ ಜು ಯಿಂಗ್‌ ಎದುರು ಮಣಿದಿದ್ದ ಸಿಂಧು, ಈ ಟೂರ್ನಿಯ ಹಣಾಹಣಿಯಲ್ಲಿ13-21, 21-12, 12-21ರಿಂದ ಸೋಲು ಅನುಭವಿಸಿದರು. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ತೈ ಜು ವಿರುದ್ಧ ಭಾರತದ ಆಟಗಾರ್ತಿಗೆ ವೃತ್ತಿಜೀವನದ 17ನೇ ಸೋಲು ಇದು.ತೈ ಜು ಕಳೆದ ಏಳು ಪಂದ್ಯಗಳಲ್ಲಿ ಸಿಂಧು ಅವರ ಸವಾಲು ಮೀರಿದ್ದಾರೆ.

ಬಾಸೆಲ್‌ನಲ್ಲಿ ನಡೆದ 2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತೈ ಜು ಅವರನ್ನು ಸೋಲಿಸಿ ಸಿಂಧು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.ಸಿಂಧು ಕೊನೆಯ ಬಾರಿ ತೈಪೆ ಆಟಗಾರ್ತಿ ಎದುರು ಗೆದ್ದಿದ್ದು ಇದೇ ಪಂದ್ಯದಲ್ಲಿ.

ADVERTISEMENT

ಈ ಟೂರ್ನಿಯ 55 ನಿಮಿಷಗಳ ಪಂದ್ಯದ ಆರಂಭದಿಂದಲೇ ಉಭಯ ಆಟಗಾರ್ತಿಯರ ಮಧ್ಯೆಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಮೊದಲ ಗೇಮ್‌ನ ವಿರಾಮದ ವೇಳೆಗೆ ತೈ ಜು 15–9ರ ಮೇಲುಗೈ ಸಾಧಿಸಿದರು. ಅದೇ ಲಯದೊಂದಿಗೆ ಮುಂದುವರಿದು ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಸಿಂಧು ಭರ್ಜರಿ ತಿರುಗೇಟು ನೀಡಿದರು. ಒಂದು ಹಂತದಲ್ಲಿ 11–4ರ ಮುನ್ನಡೆ ಸಾಧಿಸಿದ ಅವರು ಅದೇ ಬಲದೊಂದಿಗೆ ಗೇಮ್‌ ಗೆದ್ದುಕೊಂಡರು.

ನಿರ್ಣಾಯಕ ಮತ್ತು ಮೂರನೇ ಗೇಮ್‌ ಮತ್ತಷ್ಟು ರಂಗೇರಿತು. ಆರಂಭದಲ್ಲಿ 7–3ರಿಂದ ಮುನ್ನಡೆ ಗಳಿಸಿದ ಸಿಂಧು ಬಳಿಕ ಎಡವಿದರು. ವಿರಾಮದ ಬಳಿಕ ತೈಜು ಸಂಪೂರ್ಣ ಪಾರಮ್ಯ ಮೆರೆದರು. ಭಾರತದ ಆಟಗಾರ್ತಿಯ ಸ್ವಯಂಕೃತ ತಪ್ಪುಗಳೂ ತೈ ಜು ಅವರ ಗೆಲುವಿಗೆ ಕೊಡುಗೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.