ADVERTISEMENT

ವಿಶ್ವ ಬ್ಯಾಡ್ಮಿಂಟನ್: ಗಾಯಗೊಂಡಿರುವ ಪಿ.ವಿ. ಸಿಂಧು ಗೈರು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 23:00 IST
Last Updated 13 ಆಗಸ್ಟ್ 2022, 23:00 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಗಾಯಗೊಂಡಿರುವುದರಿಂದ ಮುಂಬರಲಿರುವ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ.

2019ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸಿಂಧು ಚಿನ್ನದ ಪದಕ ಜಯಿಸಿದ್ದರು. ಅಲ್ಲದೇ ವಿಶ್ವ ಟೂರ್ನಿಯಲ್ಲಿ ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದ ದಾಖಲೆಯೂ ಅವರ ಹೆಸರಲ್ಲಿದೆ. ಇತ್ತೀಚೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೂ ಅವರು ಚಿನ್ನದ ಪದಕ ಜಯಿಸಿದ್ದರು.

ಆದರೆ, ಅವರ ಎಡಗಾಲಿನಲ್ಲಿ ಮೂಳೆಮುರಿತ ಕಂಡುಬಂದಿರುವುದರಿಂದ ವಿಶ್ರಾಂತಿ ಪಡೆಯಲಿದ್ದಾರೆ.

ADVERTISEMENT

‘ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವುದರಿಂದ ಉತ್ತಮ ಲಯದಲ್ಲಿದ್ದೇನೆ. ಆದರೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡುವುದನ್ನು ತಪ್ಪಿಸಿಕೊಳ್ಳುತ್ತಿರುವುದು ದುರದೃಷ್ಟಕರ. ಕಾಮನ್‌ವೆಲ್ತ್ ಕೂಟದ ಕ್ವಾರ್ಟರ್‌ಫೈನಲ್‌ನಲ್ಲಿ ಆಡುವಾಗಲೇ ಕಾಲಿನಲ್ಲಿ ನೋವು ಇತ್ತು. ಗಾಯಗೊಳ್ಳುವ ಆತಂಕವೂ ಇತ್ತು. ಆದರೆ, ನನ್ನ ಕೋಚ್ ಮತ್ತು ಫಿಸಿಯೊ ಬಹಳಷ್ಟು ಮುತುವರ್ಜಿ ವಹಿಸಿ ಆರೈಕೆ ಮಾಡಿದ್ದರಿಂದ ಕೊನೆಯ ಹಂತದವರೆಗೂ ಆಡಲು ಸಾಧ್ಯವಾಯಿತು’ ಎಂದು ಸಿಂಧು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಫೈನಲ್‌ ಮುಗಿದ ನಂತರ ಕಾಲಿನಲ್ಲಿ ವಿಪರೀತ ನೋವಿತ್ತು. ಅದರಿಂದಾಗಿ ಹೈದರಾಬಾದಿಗೆ ಬಂದ ಕೂಡಲೇ ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಂಡೆ. ಫ್ರಾಕ್ಚರ್ ಇರುವುದು ಖಚಿತವಾಯಿತು. ಕೆಲವು ವಾರಗಳವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ’ ಎಂದು ಸಿಂಧು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.