ADVERTISEMENT

ಪ್ರಶಸ್ತಿ ಸುತ್ತಿಗೆ ಸಿಂಧು ಲಗ್ಗೆ

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಫೈನಲ್‌ನಲ್ಲಿ ವಾಂಗ್ ಎದುರಾಳಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 3:29 IST
Last Updated 17 ಜುಲೈ 2022, 3:29 IST
ಭಾರತದ ಪಿ.ವಿ.ಸಿಂಧು ಆಟದ ಪರಿ– ಎಎಫ್‌ಪಿ ಚಿತ್ರ
ಭಾರತದ ಪಿ.ವಿ.ಸಿಂಧು ಆಟದ ಪರಿ– ಎಎಫ್‌ಪಿ ಚಿತ್ರ   

ಸಿಂಗಪುರ (ಪಿಟಿಐ): ಗೆಲುವಿನ ಓಟ ಮುಂದುವರಿಸಿದ ಭಾರತದ ಪಿ.ವಿ.ಸಿಂಧು ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಶನಿವಾರ ಇಲ್ಲಿ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸಿಂಧು21-15, 21-7ರಿಂದ ಜಪಾನ್‌ನ ಸಿನಾ ಕವಾಕಮಿ ಅವರನ್ನು ಮಣಿಸಿದರು. 32 ನಿಮಿಷಗಳ ಈ ಪಂದ್ಯದಲ್ಲಿ ಭಾರತದ ಆಟಗಾರ್ತಿ ಸಂಪೂರ್ಣ ಪಾರಮ್ಯ ಮೆರೆದರು.

ಈ ವರ್ಷ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿರುವ ಸಿಂಧು, ಈ ಋತುವಿನಲ್ಲಿ ಮೊದಲ ಸೂಪರ್ 500 ಟೂರ್ನಿಯ ಟ್ರೋಫಿ ಗೆಲುವಿಗೆ ಇನ್ನೊಂದೇ ಹೆಜ್ಜೆ ದೂರದಲ್ಲಿದ್ದಾರೆ.

ADVERTISEMENT

ಕವಾಕಮಿ ಎದುರಿನ ಪಂದ್ಯದಲ್ಲಿ ಬಿರುಸಿನ ಸ್ಮ್ಯಾಷ್‌ಗಳ ಮೂಲಕ ರಂಜಿಸಿದರು. ಮೊದಲ ಗೇಮ್‌ನ ವಿರಾಮದ ವೇಳೆಗೆ ಮೂರು ಪಾಯಿಂಟ್‌ಗಳಿಂದ ಮುಂದಿದ್ದರು. ಹಿನ್ನಡೆ ತಗ್ಗಿಸಿಕೊಳ್ಳಲು ಜಪಾನ್ ಆಟಗಾರ್ತಿ ತೀವ್ರ ಪ್ರಯತ್ನ ನಡೆಸಿದರು. ಕೆಲವು ಸ್ವಯಂಕೃತ ತಪ್ಪುಗಳನ್ನು ಎಸಗಿದರು. ಈ ಹಂತದಲ್ಲಿ ಎರಡು ವಿಡಿಯೊ ರೆಫರಲ್‌ ನಿರ್ಧಾರಗಳುಸಿಂಧು ಪರವಾಗಿ ಬಂದವು. ಬೇಸ್‌ಲೈನ್‌ನಲ್ಲಿಯೂ ಮಿಂಚಿದ ಭಾರತದ ಆಟಗಾರ್ತಿ 18–14ರಿಂದ ಮುನ್ನಡೆ ಸಾಧಿಸಿ ಅದೇ ಬಲದೊಂದಿಗೆ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲಿಯೂ ಕವಾಕಮಿ ಪರದಾಟ ಮುಂದುವರಿಯಿತು. ಸಿಂಧು ಆರಂಭದಲ್ಲೇ 5–0ಯಿಂದ ಮೇಲುಗೈ ಸಾಧಿಸಿದರು. ದೀರ್ಘರ‍್ಯಾಲಿಗಳಲ್ಲಿ ಮಿನುಗಿದ ಅವರು ವಿರಾಮದ ವೇಳೆಮುನ್ನಡೆಯನ್ನು 11–4ಕ್ಕೆ ಕೊಂಡೊಯ್ದರು. ಬಳಿಕವೂ ಹಿಂದಿರುಗಿ ನೋಡಲಿಲ್ಲ. ಗೇಮ್ ಹಾಗೂ ಪಂದ್ಯ ಜಯಿಸಿದ ಸಂಭ್ರಮದಲ್ಲಿ ಮಿಂದೆದ್ದರು.

ಮೂರನೇ ಶ್ರೇಯಾಂಕದ ಸಿಂಧು, ಫೈನಲ್‌ನಲ್ಲಿ ಚೀನಾದ ವಾಂಗ್‌ ಜಿ ಯಿ ಅವರನ್ನು ಎದುರಿಸುವರು. ವಾಂಗ್‌ ಅವರು ಏಷ್ಯನ್ ಚಾಂಪಿಯನ್‌ಷಿಪ್ ಚಿನ್ನದ ಪದಕ ವಿಜೇತೆ. ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅವರು21-14, 21-14ರಿಂದ ಒಹೊರಿ ಆಯಾ ಅವರನ್ನು ಮಣಿಸಿದರು.ಸಿಂಧು ಈ ವರ್ಷದ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ವಾಂಗ್ ಎದುರು ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.