ನವದೆಹಲಿ: ಅನುಭವಿ ಆಟಗಾರ್ತಿ ಪಿ.ವಿ.ಸಿಂಧು, ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಲು ಸ್ವಲ್ಪ ಪ್ರಯಾಸಪಡಬೇಕಾಯಿತು. ಪುರುಷರ ಡಬಲ್ಸ್‌ನಲ್ಲಿ ಏಳನೇ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಸಹ ಮಂಗಳವಾರ ಮೊದಲ ಸುತ್ತಿನಲ್ಲಿ ಜಯಗಳಿಸಲು ಮೂರು ಗೇಮ್‌ಗಳನ್ನು ಆಡಬೇಕಾಯಿತು.
ವರ್ಷದ ಮೊದಲ ಟೂರ್ನಿಯಾದ ಮಲೇಷ್ಯಾ ಓಪನ್ ತಪ್ಪಿಸಿಕೊಂಡಿದ್ದ ಸಿಂಧು 21–14, 22–20 ರಿಂದ ವಿಶ್ವದ 24ನೇ ಕ್ರಮಾಂಕದ ಆಟಗಾರ್ತಿ, ಚೀನಾ ತೈಪೆಯ ಸುಂಗ್ ಶುವೊ ಯುನ್ ಮೇಲೆ ಜಯಗಳಿಸಿದರು.
‘ದೀರ್ಘ ವಿರಾಮದ ನಂತರ ಕಣಕ್ಕಿಳಿದಾಗ ಲಯ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಆದರೆ ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದ್ದರಿಂದ ಸಂತಸವಾಗಿದೆ’ ಎಂದು ಸಿಂಧು ಪ್ರತಿಕ್ರಿಯಿಸಿದರು. ವಿಶ್ವದ 16ನೇ ಕ್ರಮಾಂಕದ ಆಟಗಾರ್ತಿ ಎರಡನೇ ಸುತ್ತಿನಲ್ಲಿ ಜಪಾನ್‌ನ ಮನಾಮಿ ಸುಯಿಝು ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿಗೆ ನೆಚ್ಚಿನ ಜೋಡಿಯಾಗಿರುವ ಸಾತ್ವಿಕ್–ಚಿರಾಗ್ ಕೆಲವು ಆತಂಕದ ಕ್ಷಣಗಳನ್ನು ಮೆಟ್ಟಿನಿಂತು 23–21, 19–21, 21–16 ರಿಂದ ಮಲೇಷ್ಯಾದ ಮನ್ ವೀ ಚೊಂಗ್– ಕೈ ವುನ್ ಟೀ ಅವರನ್ನು ಸೋಲಿಸಿದರು. ಮಲೇಷ್ಯಾದ ಆಟಗಾರರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.
ಪ್ರತಿಭಾನ್ವಿತ ಆಟಗಾರ ಕಿರಣ್ ಜಾರ್ಜ್ 21–19, 14–21, 27–25 ರಿಂದ 25ನೇ ಕ್ರಮಾಂಕದ ಯುಶಿ ತನಾಕ ಅವರನ್ನು ಸೋಲಿಸಿದರು.
ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ–ಧ್ರುವ್ ಕಪಿಲಾ 8–21, 21–19, 21–17 ರಿಂದ ಚೀನಾ ತೈಪೆಯ ಚೆನ್ ಚೆಂಗ್ ಕುವಾನ್–ಸು ಯಿನ್ ಹಯಿ ಜೋಡಿಯನ್ನು ಮಣಿಸಿತು. ಮಹಿಳೆಯರ ಡಬಲ್ಸ್‌ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಅಶ್ವಿನಿ ಭಟ್– ಶಿಖಾ ಗೌತಮ್ ಜೋಡಿ 22–20, 21–18ರಲ್ಲಿ ಕ್ರಿಸ್ಟಲ್ ಲೈ–ಜೇಕಿ ಡೆಂಟ್ ಜೋಡಿಯನ್ನು ಹಿಮ್ಮೆಟ್ಟಿಸಿತು.
ಆದರೆ ಮಹಿಳಾ ಡಬಲ್ಸ್‌ನಲ್ಲಿ, ಐದನೇ ಶ್ರೇಯಾಂಕದ ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್ ಜೋಡಿ ಹೊರಬಿತ್ತು. ಜಪಾನ್‌ನ ಅರಿಸಾ ಇಗರಾಶಿ– ಅಯಾಕೊ ಸಕುರಾಮೊಟೊ ಜೋಡಿ 23–21, 21–19ರಲ್ಲಿ ಭಾರತದ ಆಟಗಾರ್ತಿಯರನ್ನು ಮಣಿಸಿತು. ಅಮೃತಾ ಪ್ರಮುತೇಶ್– ಸೊನಾಲಿ ಸಿಂಗ್ ಜೋಡಿ ಕೂಡ ನಿರ್ಗಮಿಸಿತು.
ಮಿಶ್ರ ಡಬಲ್ಸ್‌ನಲ್ಲಿ ಸತೀಶ್ ಕರುಣಾಕರನ್– ಎ.ವರಿಯತ್ ಜೋಡಿ ಸೋಲನುಭವಿಸಿತು. ರೋಹನ್ ಕಪೂರ್– ರುತ್ವಿಕಾ ಗದ್ದೆ ಜೋಡಿ ಕೂಡ ಮೊದಲ ಸುತ್ತಿಲ್ಲಿ ಪರಾಜಯ ಕಂಡಿತು.
ಕೊನೆಗಳಿಗೆಯಲ್ಲಿ ಪ್ರವೇಶ ಅವಕಾಶ ಪಡೆದ ಕಿದಂಬಿ ಶ್ರೀಕಾಂತ್ ಟೂರ್ನಿಯಿಂದ ಹಿಂದೆಸರಿದ ಪರಿಣಾಮ ವೆಂಗ್ ಹಾಂಗ್ (ಚೀನಾ) ಅವರು ವಾಕ್ ಓವರ್ ಪಡೆದು ಎರಡನೇ ಸುತ್ತಿಗೆ ಮುನ್ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.