ADVERTISEMENT

ಎರಡನೇ ಸುತ್ತಿಗೆ ಸಿಂಧು, ಶ್ರೀಕಾಂತ್‌

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:29 IST
Last Updated 3 ಏಪ್ರಿಲ್ 2019, 20:29 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಕ್ವಾಲಾಲಂಪುರ: ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಅವರು ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಸಿಂಧು ಅವರು ಬುಧವಾರ ನಡೆದ ಪ್ರಬಲ ಪೈಪೋಟಿಯಲ್ಲಿ ಜಪಾನ್‌ನ ಅಯಾ ಒಹೊರಿ ಅವರನ್ನು 22–20, 21–12ರ ಅಂತರದಿಂದ ಮಣಿಸಿದರು. ಆ ಮೂಲಕ ಒಹೊರಿ ವಿರುದ್ಧ ಆರನೇ ಪಂದ್ಯ ಗೆದ್ದ ದಾಖಲೆ ಬರೆದರು.

ಅದೇ ರೀತಿ, ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್‌ ಕಿದಂಬಿ ಅವರು ಇಂಡೊನೇಷ್ಯಾದ ಇಶಾನ್‌ ಮೌಲಾನಾ ಮುಸ್ತಫಾ ಎದುರು 21–18, 21–16 ಅಂತರದಿಂದ ಗೆದ್ದರು. 38 ನಿಮಿಷಗಳ ಈ ಹೋರಾಟ ನಡೆಯಿತು. ಸಮೀರ್‌ ವರ್ಮಾ ಆರಂಭಿಕ ಸುತ್ತಿನಲ್ಲೇ ಸೋತಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಪರವಾಗಿ ಶ್ರೀಕಾಂತ್‌ ಮಾತ್ರ ಕಣದಲ್ಲಿದ್ದಾರೆ.

ADVERTISEMENT

ಮೊದಲ ಪಂದ್ಯದ ಆಟದ ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟ ಮಾಡಿದ ಸಿಂಧು 5–2ರಿಂದ ಮುನ್ನಡೆ ಕಾಯ್ದುಕೊಂಡರು. ನಂತರ ಜಪಾನ್‌ನ ಒಹೊರಿ 12–7ರಿಂದ ಮುನ್ನಡೆ ಸಾಧಿಸಿದರು. ‌ನಂತರದ ಸುತ್ತಿನಲ್ಲಿ ತಿರುಗೇಟು ನೀಡಿದ ಸಿಂಧು 13–12ರಿಂದ ಅಂತರ ಕಾಯ್ದುಕೊಂಡರು. ರೋಚಕ ಹಣಾಹಣಿಯಲ್ಲಿಮೂರು ಪಾಯಿಂಟ್ಸ್‌ಗಳ ಮುನ್ನಡೆಯೊಂದಿಗೆ ಸಿಂಧು ಗೆಲುವಿನ ತೋರಣ ಕಟ್ಟಿದರು.

ಹಿಂದಿನ ತಪ್ಪಿನಿಂದ ಪಾಠ ಕಲಿತ ಸಿಂಧು, ಬಿರುಸಿನ ಆಟ ಪ್ರದರ್ಶಿಸಿದರು. ಅಂತಿಮವಾಗಿ 12–5ರಿಂದ ಮುನ್ನಡೆ ಕಾಯ್ದುಕೊಂಡು ಜಯಿಸಿದರು. ಮಲೇಷ್ಯಾ ಓಪನ್‌ನಲ್ಲಿ ಭಾರತದ ಆಟಗಾರ್ತಿ ಸಿಂಧು ಐದನೇ ಶ್ರೇಯಾಂಕ ಹೊಂದಿದ್ದಾರೆ. ಎರಡನೇ ಸುತ್ತಿನಲ್ಲಿ ಕೊರಿಯಾದ ಸಂಗ್‌ ಜಿ ಹುಯನ್‌ ಅವರನ್ನು ಎದುರಿಸುವರು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಥಾಯ್ಲೆಂಡ್‌ನ ಖೊಸಿಟ್‌ ಫೆಟ್‌ಪ್ರದಾವ್ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.