ADVERTISEMENT

ಪ್ರೀ ಕ್ವಾರ್ಟರ್‌ ಫೈನಲ್‌ಗೆ ಸಿಂಧು, ಕಿದಂಬಿ ಶ್ರೀಕಾಂತ್‌

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಡಬಲ್ಸ್‌ ವಿಭಾಗದಲ್ಲಿ ಭಾರತಕ್ಕೆ ನಿರಾಸೆ

ಪಿಟಿಐ
Published 15 ಅಕ್ಟೋಬರ್ 2020, 17:29 IST
Last Updated 15 ಅಕ್ಟೋಬರ್ 2020, 17:29 IST
ಪಿ.ವಿ. ಸಿಂಧು
ಪಿ.ವಿ. ಸಿಂಧು   

ಕ್ವಾಲಾಲಂಪುರ: ಭಾರತದ ಪಿ. ವಿ. ಸಿಂಧು ಹಾಗೂ ಕಿದಂಬಿ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಹದಿನಾರರ ಘಟ್ಟ ತಲುಪಿದ್ದಾರೆ.

ಕಿದಂಬಿ ಶ್ರೀಕಾಂತ್ ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅವರು ಕೆನಡಾದ ಜೇಸನ್ ಆ್ಯಂಟನಿ ಹೋ ಶು ವಿರುದ್ಧ ಸುಲಭ ಜಯ ಸಾಧಿಸಿದರು.

ಕೋವಿಡ್–19 ಹಾವಳಿಯಿಂದಾಗಿ ಏಳು ತಿಂಗಳು ಸ್ಪರ್ಧಾತ್ಮಕ ಕಣದಿಂದ ದೂರ ಇದ್ದ ಶ್ರೀಕಾಂತ್ ಹಳೆಯ ಲಯದಲ್ಲೇ ಆಡಿ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಗೇಮ್‌ನ ಆರಂಭದಲ್ಲಿ ಜೇಸನ್ ಆ್ಯಂಟನಿ ಸ್ವಲ್ಪ ಪ್ರತಿರೋಧ ತೋರಿದರೂ ಮಿಂಚಿನ ಸ್ಮ್ಯಾಷ್‌ ಮತ್ತು ಚುರುಕಿನ ಡ್ರಾಪ್‌ ಶಾಟ್‌ಗಳ ಮೂಲಕ ಶ್ರೀಕಾಂತ್ ಮೇಲುಗೈ ಸಾಧಿಸಿದರು. ಕೇವಲ 33 ನಿಮಿಷಗಳಲ್ಲಿ ಮುಗಿದ ಹಣಾಹಣಿಯಲ್ಲಿ ಐದನೇ ಶ್ರೇಯಾಂಕದ ಭಾರತದ ಆಟಗಾರ21–15, 21–14ರಲ್ಲಿ ಎದುರಾಳಿಯನ್ನು ಮಣಿಸಿದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 14ನೇ ಸ್ಥಾನದಲ್ಲಿರುವ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ 9–4ರ ಮುನ್ನಡೆ ಗಳಿಸಿದ್ದರು. ನಂತರ ಸತತ ಒಂಬತ್ತು ಪಾಯಿಂಟ್ ಸಂಪಾದಿಸಿ ಭಾರಿ ಅಂತರವನ್ನು ಕಾಯ್ದುಕೊಂಡು ಎದುರಾಳಿಯನ್ನು ದಂಗುಬಡಿಸಿದರು. ಹೀಗಾಗಿ ಗೇಮ್‌ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನ ಒಂದು ಹಂತದಲ್ಲಿ ಶ್ರೀಕಾಂತ್ 5–8ರ ಹಿನ್ನಡೆಯಲ್ಲಿದ್ದರು. ಈ ಸಂದರ್ಭದಲ್ಲಿ ಚುರುಕಿನ ಆಟಕ್ಕೆ ಮೊರೆ ಹೋದ ಅವರು ಪ್ರಬಲ ಸ್ಮ್ಯಾಷ್‌ಗಳನ್ನು ಸಿಡಿಸಿದರು. ಸತತ ಆರು ಪಾಯಿಂಟ್ ಕಲೆ ಹಾಕಿ 11–8ರ ಮುನ್ನಡೆ ಗಳಿಸಿದರು. ವಿರಾಮದ ನಂತರ ಕೆನಡಾ ಆಟಗಾರ ತಿರುಗೇಟು ನೀಡಿ ಹಿನ್ನಡೆಯನ್ನು 10–11ಕ್ಕೆ ಇಳಿಸಿ ಭರವಸೆ ಮೂಡಿಸಿದರು. ಆದರೆ ತಂತ್ರಗಳನ್ನು ಬದಲಿಸಿದ ಶ್ರೀಕಾಂತ್ 15–10ರ ಮುನ್ನಡೆ ಸಾಧಿಸಿದರು. ನಂತರ ಸುದೀರ್ಘ ರ‍್ಯಾಲಿಗಳು ಕಂಡುಬಂದವು. ಶ್ರೀಕಾಂತ್‌ಗೆ ಪಾಯಿಂಟ್‌ಗಳು ಬರತೊಡಗಿದವು. ಹೀಗಾಗಿ ಅವರ ಮುನ್ನಡೆ 19–11ಕ್ಕೆ ಹಿಗ್ಗಿತು. ಕೊನೆಯ ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಕಲೆಹಾಕುವುದು ಅವರಿಗೆ ಸುಲಭವಾಗಿರಲಿಲ್ಲ. 20–14ರ ಮುನ್ನಡೆಯಲ್ಲಿದ್ದಾಗ ಅವರ ಶಾಟ್‌ ಹಿಂದಿರುಗಿಸುವಲ್ಲಿ ಜೇಸನ್ ಆ್ಯಂಟನಿ ಎಡವಿದರು.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ‌ಸಿಂಧು ಅವರು ಜಪಾನ್‌ನ ಅಯಾ ಒಹೊರಿ ಅವರನ್ನು 26–24, 21–15ರಿಂದ ಮಣಿಸಿದರು. ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸಿಂಧು ಅವರು ಬೆಳ್ಳಿಯ ಸಾಧನೆ ಮಾಡಿದ್ದರು.

ವಿಶ್ವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿರುವ ಅಯಾ ಅವರು ಭಾರತದ ಆಟಗಾರ್ತಿಗೆ ಮೊದಲ ಗೇಮ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರು. ಆದರೆ, ಎರಡನೇ ಗೇಮ್‌ನಲ್ಲಿ ಸಿಂಧು ಅವರು ಮನಮೋಹಕ ಸ್ಮ್ಯಾಷ್‌ ಹಾಗೂ ರಿಟರ್ನ್‌ಗಳಿಂದ ಎದುರಾಳಿಯನ್ನು ಕಟ್ಟಿಹಾಕಿದರು.

ಮುಂದಿನ ಪಂದ್ಯದಲ್ಲಿ ಸಿಂಧು ಅವರು ಮಲೇಷ್ಯಾದ ಯಿಂಗ್‌ ಯಿಂಗ್‌ ಲೀ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.