ADVERTISEMENT

ಕೋವಿಡ್‌ನಿಂದ ಗುಣಮುಖ: ತಂಡ ಸೇರಿಕೊಂಡ ಹಾಕಿ ಆಟಗಾರರು

ಪಿಟಿಐ
Published 26 ಸೆಪ್ಟೆಂಬರ್ 2020, 13:49 IST
Last Updated 26 ಸೆಪ್ಟೆಂಬರ್ 2020, 13:49 IST
ಮನ್‌ಪ್ರೀತ್‌ ಸಿಂಗ್‌–ಎಎಫ್‌ಪಿ ಚಿತ್ರ
ಮನ್‌ಪ್ರೀತ್‌ ಸಿಂಗ್‌–ಎಎಫ್‌ಪಿ ಚಿತ್ರ   

ನವದೆಹಲಿ: ಕೋವಿಡ್‌–19 ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಆರು ಮಂದಿ ಹಾಕಿ ಆಟಗಾರರು, ತಂಡದ ಶಿಬಿರವನ್ನು ಸೇರಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಶನಿವಾರ ತಿಳಿಸಿದ್ದಾರೆ.

ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಭಾರತ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಜಸ್ಕರನ್‌ ಸಿಂಗ್‌, ವರುಣ್‌ ಕುಮಾರ್‌, ಕೃಷ್ಣ ಬಹಾದ್ದೂರ್‌ ಪಾಠಕ್‌ ಹಾಗೂ ಮನದೀಪ್‌ ಸಿಂಗ್ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. ಬೆಂಗಳೂರಿನಲ್ಲಿ ಆಸ್ಪ‍ತ್ರೆಗೆ ದಾಖಲಾಗಿದ್ದ ಅವರು ಆಗಸ್ಟ್‌ 17ರಂದು ಬಿಡುಗಡೆಗೊಂಡಿದ್ದರು. ತಂಡ ಸೇರಿಕೊಳ್ಳುವ ಮೊದಲು ಕೆಲವು ದಿನಗಳ ಕಾಲ ಪ್ರತ್ಯೇಕವಾಸದಲ್ಲಿದ್ದರು.

‘ಕೋವಿಡ್‌ನಿಂದ ಗುಣಮುಖರಾಗಿರುವ ಆಟಗಾರರು ತಂಡದ ಶಿಬಿರ ಸೇರಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಫಿಟ್‌ನೆಸ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ನಿಧಾನವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ‘ ಎಂದು ಹಾಕಿ ಇಂಡಿಯಾ ಆಯೋಜಿಸಿದ್ದ ವೆಬಿನಾರ್‌ನಲ್ಲಿ ರೀಡ್‌ ಹೇಳಿದ್ದಾರೆ.

ADVERTISEMENT

‘ಇನ್ನು ನಾಲ್ಕೈದು ವಾರಗಳಲ್ಲಿ ತಂಡದ ಎಲ್ಲ ಆಟಗಾರರು ಫೂರ್ಣ ಪ್ರಮಾಣದ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ‘ ಎಂದೂ ಆಸ್ಟ್ರೇಲಿಯಾ ಮೂಲದ ರೀಡ್ ವಿಶ್ವಾಸ ವ್ಯಕ್ತಪಡಿಸಿದರು.

ಪುರುಷ ಹಾಗೂ ಮಹಿಳಾ ಹಾಕಿ ತಂಡಗಳ ರಾಷ್ಟ್ರೀಯ ಶಿಬಿರವು ಬೆಂಗಳೂರಿನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಆಗಸ್ಟ್‌ 19ರಿಂದ ಪುನರಾರಂಭಗೊಂಡಿತ್ತು.

‘ನೀವು ಪೂರ್ಣಪ್ರಮಾಣದ ಫಿಟ್‌ನೆಟ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇನ್ನಷ್ಟು ದಿನ ಕಾಯಬೇಕು. ಇಲ್ಲವಾದರೆ ಗಾಯಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರು ತಿಂಗಳು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿದಿರುವ ಕಾರಣ ಬಂಡೆಸ್‌ಲಿಗಾ, ಇಪಿಎಲ್‌ನಂತಹ ಫುಟ್‌ಬಾಲ್‌ ಲೀಗ್‌ಗಳಲ್ಲಿ ಆಟಗಾರರು ಮಂಡಿರಜ್ಜು ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ನಾವು ಎಚ್ಚರಿಕೆಯಿಂದ ಮುನ್ನಡೆಯಬೇಕು‘ ಎಂದು ಮಹಿಳಾ ಹಾಕಿ ತಂಡದ ಕೋಚ್‌ ಶೋರ್ಡ್‌ ಮ್ಯಾರಿಜ್‌ ಅವರು ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.