ADVERTISEMENT

'ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್'ನಲ್ಲಿ ಹೊಸ ದಾಖಲೆ ಬರೆದ ಕೈಗಾದ ಬಾಲಕ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 9:35 IST
Last Updated 28 ಏಪ್ರಿಲ್ 2019, 9:35 IST
   

ಕಾರವಾರ: ತಾಲ್ಲೂಕಿನ ಕೈಗಾದ ಐದು ವರ್ಷದ ಬಾಲಕ ಮೊಹಮ್ಮದ್ ಸಾಖೀಬ್, ಸತತ 25 ನಿಮಿಷಗಳವರೆಗೆ ‘ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್’ ಮಾಡುವ ಮೂಲಕ ಹೊಸ ದಾಖಲೆ ಬರೆದನು.

ನಗರದ ಹೋಟೆಲ್ ಅಜ್ವಿ ಓಷಿಯನ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಈತ ಸಾಧನೆ ಮಾಡಿದ.

ಸ್ಕೇಟಿಂಗ್‌ ಶೂಗಳನ್ನು ಧರಿಸಿ, ಮುಂದಕ್ಕೆ ಬಾಗಿ ಅಂದಾಜು ಒಂದು ಸಾವಿರ ಸುತ್ತುಗಳನ್ನು ವೃತ್ತಾಕಾರದಲ್ಲಿ ತಿರುಗಿ ನೆರೆದವರು ಗಮನ ಸೆಳೆದ.

ADVERTISEMENT

ದಾಖಲೆ ಘೋಷಣೆ

ವೀಕ್ಷಕರಾಗಿ ಬಂದಿದ್ದ ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌ ಯುಕೆ ಮುಖ್ಯಸ್ಥ ಪ್ರಸಾದ್ ಗಾವಡೆ, ಹೈರೇಂಜ್ ಆಫ್ ಬುಕ್ ರೆಕಾರ್ಡ್ಸ್ ನ ಬಸವರಾಜ್ ಜಿ., ಏಷ್ಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನ ಹರೀಶ್ ದಾಖಲೆಯನ್ನು ಘೋಷಿಸಿದರು. ಜತೆಗೆ, ಸಖೀಬ್ ಗೆ ಪ್ರಮಾಣ ಪತ್ರ ವಿತರಿಸಿದರು.

‘ಲಿಂಬೋ ಸ್ಪಿನ್ನಿಂಗ್ ಸ್ಕೇಟಿಂಗ್‌ನಲ್ಲಿ ಸಖೀಬ್ ಮಾಡಿರುವ ಈ ಸಾಧನೆ ವಿಶ್ವದಾಖಲೆಯಾಗಲಿದೆ’ ಎಂದು ಮೂವರೂ ವೀಕ್ಷಕರು ಸುದ್ದಿಗಾರರಿಗೆ ತಿಳಿಸಿದರು.

‘ಸಖೀಬ್ ನ ಈ ಸಾಧನೆಯ ಪ್ರದರ್ಶನವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದ್ದು, ಅದನ್ನು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆಗೆ ಕಳುಹಿಸಿಕೊಡಲಾಗುವುದು’ ಎಂದು ತರಬೇತುದಾರ ದಿಲೀಪ್‌ ಹಣಬರ ಹೇಳಿದರು.

ಐದು ವರ್ಷದ ಬಾಲಕ

ಸಖೀಬ್ ಗೆ ಈಗ ಕೇವಲ ಐದು ವರ್ಷ. ಯುಕೆಜಿಯಲ್ಲಿ ಈತ ಕಲಿಯುತ್ತಿದ್ದಾನೆ. ಎರಡು ವರ್ಷ ಇರುವಾಗಲೇ ಕೈಗಾ ರೋಲರ್ಸ್ ಸ್ಕೇಟಿಂಗ್ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿದ್ದ. ದಿನಕ್ಕೆ ಎರಡರಿಂದ ಮೂರು ತಾಸು ಈತ ತರಬೇತುದಾರ ದಿಲೀಪ್ ಹಣಬರ್ ಅವರ ಬಳಿ ತರಬೇತಿ ಪಡೆಯುತ್ತಿದ್ದ. ಸತತ ಪ್ರಯತ್ನದಿಂದಾಗಿ ಇದೀಗ ಚಿಕ್ಕ ವಯಸ್ಸಿನಲ್ಲೇ ಹೊಸ ದಾಖಲೆ ಮಾಡಿದ್ದಾನೆ.

ಸಾಖೀಬ್‌ನ ತಂದೆ ಮೊಹಮ್ಮದ್ ರಫೀಕ್, ತಾಯಿ ಸಬೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.